ಶನಿವಾರ, ಮಾರ್ಚ್ 20, 2021

ಹೋಳಿ ಹುಣ್ಣಿಮೆ ಹಾಡು. ಮಂಡೆ ಮ್ಯಾಲೆ.....

 ಮಂಡೆ ಮ್ಯಾಲೆ ಹೋಳಿ ಹುಣ್ಣೀಮೆ........


ಒಂದು ಆಹ್ವಾನ. ಯಾವುದೇ ಹಾಡುಗಾರರು ಇದನ್ನು ಹಾಡಿ ನನಗೆ ಕಲಿಸಿದರೆ, you tubenalli ಹೆಸರಿನ ಸಮೇತ ಹಾಕಲಾಗುವುದು.

 

ಓ ಮಾದೇವ ನಿನ್ನ ಮಂಡೆ ಮ್ಯಾಲೆ ಹೋಳಿ ಹುಣ್ಣೀಮೆ........

ಓ ಮಾದೇವ ನಿನ್ನ ಮಂಡೆ ಮೇಲೆ ಕಂಡೆನೇನೇನಾ.......

ಓ ಮಾದೇವ ನಿನ್ನ ಕಣ್ಣ ಮುಂದೆ ಕಂಡೆನೇನೇನಾ.......

ಓ ಮಾದೇವ ನಿನ್ನ ಕಣ್ಣ ಮುಂದೆ ನಾ ಕಂಡೆನೇನೇನಾ.......

 

ಆ ಮಾದೇವಿ ನಿನ್ನ ವರಿಸ ನಿಂತಾಳಾ......ತಪಕೆ ಕುಂತಾಳಾ.........

ಆಕಿ ತಾಪಕ ಪ್ರಕೃತಿ ನಲಿದಾಳಾ......, ಭೂತಾಯಿ ನಡುಗ್ಯಾಳಾ....

ಆ ದೇವಗಣದ ತುಡಿತ ಕಂಡೇನಾ ......ಮಿಡಿತ ಕಂಡೇನಾ...........

ಆ ಕಾಮದೇವನ ಕುಣಿತ ಕಂಡೇನಾ...ಬಿಲ್ಲಿನಂಚಿನ ಮಿಂಚ ಕಂಡೇನಾ..

ತುಡಿತ ಕಂಡೇನಾ, ಮಿಡಿತ ಕಂಡೇನಾ, ಕುಣಿತ ಕಂಡೇನಾ.......

ಓ ಮಾದೇವ, ಕಾಮನ ಪರಿ ಪರಿ ಪಾಡ ಕಂಡೇನಾ........

 

ಓ ಮಾದೇವ ನಿನ್ನ ಮಾದೇವಿ ನೀಡಿದ ಅಭಯ ಕಂಡೇನಾ....

ಆ ಕಾಮದೇವನ ಬಾಣದಂಚಲಿ ಹೂಗೊಂಚ ಕಂಡೇನಾ.......

ಆ ರತಿಯ ಆನಂದ ಕಂಡೇನಾ.. ಆನಂದ ನಂದದ್ದು ಕಂಡೇನಾ..

 

ಓ ಮಾದೇವ ನಿನ್ನ ತಪದ ಗುಂಗ ಕಂಡೇನಾ.......

ತಪದ ಭಂಗ ಕಂಡೇನಾ, ತಾಪದ ಅಂಗ ಕಂಡೇನಾ.......

ಓ ಮಾದೇವ ನಿನ್ನ ತಾಂಡವದ ರಂಗ ಕಂಡೇನಾ.....

ಓ ಮಾದೇವ ನಿನ್ನ ಮಂಡೆ ಮೇಲೆ ಕೆಂಡ ಕಂಡೇನಾ......

ಮುಕ್ಕಣ್ಣ ಒಳಗ ಕೆಂಡದುಂಡೆಯ ಚೆಂಡ ಕಂಡೇನಾ.....

ಓ ಮಾದೇವ ನಿನ್ನ ಕಣ್ಣ ಮುಂದೆ ಕಾಮ ಸುಡುದ ಕಂಡೇನಾ.....

ಓ ಮಾದೇವ ನನ್ನ ಕಣ್ಣ ಮುಂದೆ ರತಿಯ ರೋದನ ಕಂಡೇನಾ.....

 

ಓ ತಂಗಿ ಹುಣ್ಣಿಮೆ ಬಂತೇನಾ, ಹೋಳಿ ಹುಣ್ಣಿಮೆ ಬಂತೇನಾ.....

ಇಂದು ನಾ ಕಂಡೆನೇನೇನಾ.......

ಮತ್ತ ಹೋಳಿ ಹುಣ್ಣಿಮೆ ಬಂದೇ ಬಂತೇನಾ......

ಊರ ಪೋರ ಸೂರ ಮುರಿದು ಶೂರನಾದದ್ದ ಕಂಡೇನಾ......

ಗಳವ ಕಟ್ಟಾಲು ಉಡದಾರ ಬಿಚ್ಚಿದ್ದ ಕಣ್ಣಾರೆ ಕಂಡೇನಾ....

ಅಂಗಳದಾಗ ಗಳದ ಮಂಗಳ ಗೊಂಬಿ ಕಂಡೇನಾ.....

ಕಟಿಗಿ, ಬೆರಿಣಿ ಕದಿವ ಮಂದಿಯ ದೊಂಬಿ ಕಂಡೇನಾ.....

ಕಾಮನ ಕಾಣಿಕಿ ಕೊಡದವರ ಕಚ್ಚಿದ್ದ ಕಂಡೇನಾ....

ಮನೆಯಾಗ ಕುಂತ “ಉತ್ತರ” ಜಂಬ ಕೊಚ್ಚಿದ್ದು ಕಂಡೇನಾ.....

ಓ ಮಾದೇವ ನಿನ್ನ ಮಂಡೆ ಮ್ಯಾಲೆ ಹೋಳಿ ಹುಣ್ಣೀಮೆ........

 

ಓ ಮಾದೇವಿ ನಿನ್ನ ಅಭಯ ಮರೆತೇನಾ........

ಓ ಮಾದೇವಿ ನಿನ್ನ ಮಾದೇವನ ಗಮನಕ ತಂದೇನ......

ಆ ಮಾದೇವನ ಮಂಡೆ ಸುತ್ತ ಕಾಮ ಸುಳಿದಾನ......

ಓ ಅಳಿದ ಕಾಮ ತುಳಿದಾನ, ಮಾದೇವಿ ನೀ ಗಮನ ಸೆಳಿದೇನಾ.....

 

ತೊಟ್ಟಿಯ ತುಂಬಾ ಬಾಗಿದ ಕಾಮನ ಬಿಲ್ಲ ಕಂಡೇನಾ......

ಪೋರ ಪೋರಿ ಚೋರಿ ಚೋರಿ ಬಣ್ಣ ತೂರಿದ್ದ ಕಂಡೇನಾ......

ಕೆನ್ನೆಯ ತುಂಬಾ ಪ್ರೇಮವ ಸವರಿ ಕುಣಿವ ಕಾಮ ಕಂಡೇನಾ......

ಗೋಡಿ ಮ್ಯಾಲೆ, ಗಾಡಿ ಮ್ಯಾಲೆ, ಕಾಮನ ಮಾಲಿ ಕಂಡೇನಾ........

ಅಜ್ಜನ ಬೋಳು ತಲಿಯ ಮ್ಯಾಲೆ, ಅಜ್ಜಿಯ ಗೋಳು ಕಂಡೇನಾ....

ಓಣಿಯ ತುಂಬಾ ಬಣ್ಣದಿ ತೇಲುವ ದೋಣಿಯ ಕಂಡೇನಾ....

ಕಾಯಿ, ಕಡ್ಲಿ, ಕಬ್ಬು ಬೆರೆತ ಹುರಿದ ಪುರಿಯ ಹಂಚಿದ್ದು ಕಂಡೇನಾ......

 

ಓ ಮಾದೇವ ನಿನ್ನ ಕಾರಣ ಓಕುಳಿ ತೋರಣ ಕಂಡೇನಾ........

ಓ ಮಾದೇವ ನಿನ್ನ ಹೋಳಿಯ ಹೋಳಿಗೆ, ಉಂಡೆ ಉಂಡೇನಾ....

ಓ ಮಾದೇವ ನನ್ನ ಮಂಡೆ ಮ್ಯಾಲೆ ಕಾದ ಹಂಡೆ ನೀರೇನಾ.......

ಓ ಮಾದೇವ ಆ ಮಾದೇವಿಗ ನೀ ಹೀಂಗ ಒಲಿದೇನಾ, ನೀ ಹೀಂಗ ಒಲಿದೇನಾ...

ಆ ಕಾಮದೇವನ ಮರುಜನುಮ ಕಂಡೇನಾ.......

 

ಓ ಮಾದೇವ ನಿನ್ನ ಮಂಡೆ ಮ್ಯಾಲೆ ನಾ ಹೀಂಗ ಬರೆದೇನಾ.......

 

ರಚನೆ: ಡಾ.ಪ್ರಭಾಕರ ಬೆಲವಾಡಿ, 11, ಚಿರಂಜೀವಿ, ಸುಬ್ರಹ್ಮಣ್ಯಪುರ ರಸ್ತೆ,

ಉತ್ತರಹಳ್ಳಿ, ಬೆಂಗಳೂರು ೫೬೦೦೬೧. ಮೊ.94484 88910

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...