ಶುಕ್ರವಾರ, ಮೇ 15, 2026

ಉಕ್ಕಿನ ಗೂಡಿನ ಮೌನ ಯೋಗಿ


 ಉಕ್ಕಿನ ಗೂಡಿನ ಮೌನ ಯೋಗಿ

ನಗರವು ಮಲಗಿದೆ ಸುಖದ ಉಡಿಯಲಿ,

ಹಳಿಗಳ ಮೇಲೆ ನಕ್ಷತ್ರದ ಹೊಳಪು,

ಸಾವಿರ ಜೀವಗಳು ಕನಸಿನ ಕಡಲಲಿ,

ಹೊದ್ದಿವೆ ಮೌನದ ಬೆಚ್ಚನೆಯ ಹೊದಿಕೆ.

 

ಆದರೆ ಮುಂಭಾಗದ ಆ ಕತ್ತಲ ಕೋಣೆಯಲಿ,

ಹಳದಿ ದೀಪದ ಮಂದ ಬೆಳಕಿನಲಿ,

ಎರಡು ಕಣ್ಣುಗಳು ಕತ್ತಲ ಸೀಳುತಲಿವೆ,

ಜಗದ ಪಯಣಕೆ ದಾರಿಯ ತೋರುತಲಿವೆ.

 

ಜಯಘೋಷಗಳಿಲ್ಲ, ಚಪ್ಪಾಳೆಯ ತಟ್ಟುವವರಿಲ್ಲ,

ಬರೀ ಲೋಹದ ಭಾರವಾದ ಉಸಿರಾಟ,

ಕಬ್ಬಿಣದ ಹಿಡಿತದಲಿ ದೃಢವಾದ ಹಸ್ತವಿದೆಯಲ್ಲ,

ಸಾವು-ನೋವಿನ ನಡುವೆ ನಿರಂತರ ಹೋರಾಟ.

 

ಮಳೆಯ ಗೋಡೆ ಇರಲಿ, ಚಳಿಯ ಮಂಜೇ ಇರಲಿ,

ಹಸಿರು ಸಂಕೇತದ ಏಕಾಂತದ ಕಾವಲು—

ತನ್ನದೇ ಲೋಕದಲಿ ಈ ಧೀಮಂತ ಚಾಲಕ,

ಕಣ್ಣಿಗೆ ಕಾಣದ ಅದೃಶ್ಯ ಪಾಲಕ.

 

ಯಾರಿಗೂ ಅರಿವಿಲ್ಲ ಆ ಭಾರದ ಲಿವರ್ ಹಿಡಿದ ಕೈಯ ಬಗೆಗೆ,

ಆ ಹೊಣೆಗಾರಿಕೆಯ ಅಗಾಧ ತೂಕದ ಬಿಗಿ ಬೆಸುಗೆ,

ಮೈಲಿಗಲ್ಲುಗಳು ಉರುಳುತಿವೆ ಹಳಿಗಳ ಮೇಲೆ,

ವಿಧಿಯ ಆಟವ ಗೆಲ್ಲುವ ಛಲದ ಮೇಲೆ.

 

ಪಯಣ ಮುಗಿಯಿತು, ಜನಸಾಗರ ಹರಿಯಿತು,

ನಿಲ್ದಾಣದ ಬಾಗಿಲಲಿ ಎಲ್ಲರೂ ಮಾಯ,

ಆದರೆ ಕಿಟಕಿಯ ಪಕ್ಕ ಮೌನವಾಗಿ ಕುಳಿತಿದ್ದಾನೆ ಅವನು,

ಮುಂದಿನ ಪಯಣಕೆ ಸಿದ್ಧವಾಗುತಲಿ ಇವನು.

 

ಇದೊಂದು ಕೃತಜ್ಞತೆಯಿಲ್ಲದ ಸೇವೆ, ಹೆಮ್ಮೆಯ ಪಥ,

ತೈಲ ಮತ್ತು ಉಕ್ಕಿನಲಿ ಅಡಗಿದ ಜೀವನದ ಗಾಥ,

ಅಲೆಗಳನೆಲ್ಲಾ ದಡಕ್ಕೆ ಸೇರಿಸುವವನು ಇವನೇ,

ಕತ್ತಲೆಯಲ್ಲೇ ಮರೆಯಾಗುವವನು ಇವನೇ.

 

ಹತ್ತಿದರು, ಇಳಿದರು, ಹಾದಿ ಹಿಡಿದರು ವಲಸಿಗರು

ಅವರಾರೋ, ಇವನಾರೋ, ಕೈ ಬೀಸಿದ ಚಾಲಕ

ಆತನಿಗೋ ಗುರಿ ಮುಟ್ಟಿಸಿದ ಇನ್ನಿಲ್ಲದ ಫುಲಕ  

ಹತ್ತಿ ಇಳಿಯುವ ಪಯಣಿಗರು ಇವನ ನೆನಸಿಹರೇ?!

ಭಾನುವಾರ, ಜನವರಿ 11, 2026

ಊರ ಕನ್ನಿಕೆ ಊರ ಬಯಕೆ

 ಊರ ಕನ್ನಿಕೆ ಊರ ಬಯಕೆ

 ಡಾ ಬೆಳವಾಡಿ ಪ್ರಭಾಕರ್ 

ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು

ಸೀರಿಯ ನೆರಿಗೆಯ ಮಿಂಚಿನ ಅಂಚನು ಸೊಂಟದ ಮ್ಯಾಗೆ ಗಂಟನು ಮಾಡಿ ಇಟ್ಟಿತ್ತು

ನೀರಿನ ಮುತ್ತು ಜಾರುತಲಿತ್ತು ಕಂಗಳ ಮ್ಯಾಗಿನ ಅಂಗಳದಾಗ ಆಡತಿತ್ತು ಕಾಡುತಲಿತ್ತು

ಊರಿನ ಕೇರಿಯ ಕೆರೆಯ ಬದಿಯ ಪೊದೆಯ ಮ್ಯಾಗೆ ಹದ್ದು ತುಣುಕುತ ಇಣುಕುತಲಿತ್ತು

ಏನ ಬಿಳುಪು ಏನ ಹೊಳಪು ಹಂಸವೆ ನಾಚಿ ಊರ ಆಚಿ ಕೊರಳನೇ ಹೊರಳಿಸಿ ನಿಂತಿತ್ತು

ಏನ ಅಪ್ಸರೆ ಮಣಿಯೋ ಸೌಂದರ್ಯದ ಗಣಿಯೋ ಕಣ್ಣ ರೆಪ್ಪಿ ಕುಣಿಯದೇ ನಿಂತಂತಾಗಿತ್ತು

ಏನ ನೋಡೆ ನೀಳ ಜಡೆ ಬಾನಿನ ಗೂಡ ಆಡ ಬಯಸಿ ಅರವೀಗೂಡ ಕೆಳಗಾ ಮ್ಯಾಗೆ ಆಗಿತ್ತು

ಏನ ಬಟ್ಟಿ ಏನ ಬುಟ್ಟಿ ಕೆರಿಯ ನೀರು ಸೀರಿಗೆ ಅಂಟಿತ್ತು ನೋಡಿ ನೋಡಿ ನನ್ನ ಕಣ್ಣೇ ಬತ್ತಿತ್ತು

ಅವಳ ಮಾಟವೇ ಹಾಗಿತ್ತು ನೋಟವೇ ಹಾಗಿತ್ತು ತೋಟವೇ ಹಾಗಿತ್ತು ಭಗವಂತನ ಆಟವೇ ಹಾಗಿತ್ತು

ಅವಳ ಚಿತ್ರವ ಬಿಡಿಸಲು ನಿಂತ ಕಲೆಗಾರನ ಕುಂಚ ಅಲುಗಿತ್ತು ನೋಡ ಚಿತ್ತವೇ ಕಲಕಿತ್ತು

ಅವಳು ಆರ ಸೊತ್ತೋ ಆರ ಮುತ್ತೋ ಆರ ಸೆಳೆಯತ್ತೋ ಬ್ರಹ್ಮನ ಪುಟದಲಿ ಬರೆದಿತ್ತೋ

ಅವಳ ಅಂದವ ಸ್ಮರಿಸಿ ಚೆಂದವ ಹರಸಿ ಶ್ರೀಗಂಧದ ಬಂಧನ ಊರಿಗೆ ಊರೇ ಬಯಸಿತ್ತೋ

 

ಮಂಗಳವಾರ, ನವೆಂಬರ್ 12, 2024

ಮುಕ್ತಿಯ ನೀಡಮ್ಮ

 

ಮುಕ್ತಿಯ ನೀಡಮ್ಮ  



 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಮಂಗಳವಾರ, ಅಕ್ಟೋಬರ್ 22, 2024

ಬಿ. ಎಂ. ಶ್ರೀ. ಗೆ ಅರ್ಚನೆ

 

ಬಿ. ಎಂ. ಶ್ರೀ. ಗೆ ಅರ್ಚನೆ



ನವೋದಯದರಸನೆ, ನವ್ಯ ಸ್ಥಾಪಕನೆ

ಕನ್ನಡದ ಕಣ್ವನೆಂಬಿರುದು ಪಡೆದವನೆ

ಉಸಿರ ಕೊಸರಿರುವನಕ ಕನ್ನಡವನೆ

ನೆಡುವಂತೆ, ನುಡಿವಂತೆಸಗಿದವನೆ

ಹಳಸದೆ, ಕೊಳೆಸದೆ ಉಳಿಸೆಂದವನೆ

ಬಳಸಿ, ಬೆಳೆಸುವೆಂತೆಸಗಿದ ಧೀರನೆ

ಅಮರ ‘ಶ್ರೀ’ವರ್ಯ ಬೆಳ್ಳೂರ ಸುತನೆ

ನಿನ್ನ ಸ್ತುತಿಯ ತುಂಬಿಹ ಪುಷ್ಪಾರ್ಚನೆ

ಮುದದಿ  ಕನ್ನಡ ನುಡಿಯುತ ನಿತ್ಯಾರ್ಚನೆ

ಪುಷ್ಪಾರ್ಚನೆ ‘ಶ್ರೀವರ್ಯ’ ನಿನಗೆ ನಿತ್ಯಾರ್ಚನೆ.

ರಚನೆ: ಡಾ. ಪ್ರಭಾಕರ್ ಬೆಳವಾಡಿ     

ಭಾನುವಾರ, ಅಕ್ಟೋಬರ್ 20, 2024

ಮುಕ್ತಿ

 

ಮುಕ್ತಿ  

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮಾ 

ಮಂಗಳವಾರ, ಜುಲೈ 9, 2024

ಅಮ್ಮನ ಒಲವು

 ಅಮ್ಮನೊಲವು

 


 image courtesy Pinterest 


ಮರದ ಮೇಲೊಂದು ಕುಳಿತಿತ್ತು ಹಕ್ಕಿ

ರೆಕ್ಕೆ ಬಡಿಯುತ್ತಿತ್ತು ಖುಷಿಯಿಂದ ಉಕ್ಕಿ  

ಅದಕೊಂದು ಮಾಗಿದ ಮಾವಿನ ಹಣ್ಣು ಸಿಕ್ಕಿ

ತಿನ್ನ ಬಯಸಿತ್ತು ತನ್ನ ಕೊಕ್ಕಿನಿಂದ ಹೆಕ್ಕಿ ಕುಕ್ಕಿ.

 

ನೆನೆದು ಬಳಗವ ಕೂಗಲದು ‘ಚಿಕ್ ಚಿಕ್ ಚಿಕುವು’

ಬಂದವಗೋ ಮರಿಗಳು ಹಾಡುತ ‘ಚಿವ್ ಚಿವ್ ಚಿವು’

ನೀಗಿಸಿಲು ಆ ಮಾವು ತಮ್ಮಯ ಉದರದ ಹಸಿವು

ಕುಣಿದವಗೋ ಮರಿಬಳಗ ಮೆಚ್ಚಿ ಅಮ್ಮನಾ ಒಲವು.

 

ಅಮ್ಮನೇ ಗೆಲುವು, ಅಮ್ಮನಿರೆ ಬಲು ಚೆಲುವು

ಅಮ್ಮನಿರಲು ಎಮಗೆ ಅನುದಿನವೂ ಬಲವು

ಅಮ್ಮನಪ್ಪಿದರೆ ಹಾರಿ ಹೋಗದಿರದೇ ನೋವು

ಅಮ್ಮನಿರೆ ಗರಿಗೆದರಿ ದೂರ ಹಾರ ಬಲ್ಲೆವು ನಾವು.

 

ರಚನೆ: ಡಾ. ಬೆಳವಾಡಿ ಪ್ರಭಾಕರ್

prabhakarbelavadi@gmail.com

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಉಕ್ಕಿನ ಗೂಡಿನ ಮೌನ ಯೋಗಿ

  ಉಕ್ಕಿನ ಗೂಡಿನ ಮೌನ ಯೋಗಿ ನಗರವು ಮಲಗಿದೆ ಸುಖದ ಉಡಿಯಲಿ , ಹಳಿಗಳ ಮೇಲೆ ನಕ್ಷತ್ರದ ಹೊಳಪು , ಸಾವಿರ ಜೀವಗಳು ಕನಸಿನ ಕಡಲಲಿ , ಹೊದ್ದಿವೆ ಮೌನದ ಬೆಚ್ಚನೆಯ ಹೊದ...