ಗುರುವಾರ, ಮಾರ್ಚ್ 23, 2023

ಆಧನಿಕ ರೈತ

ಆಧನಿಕ ರೈತ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಅನ್ನವ ನೀಡುವ ಅನ್ನದಾತ
ಕನ್ನವ ಹಾಕುವ ಕನ್ನದಾತ

ಉಳುವಾ ರೈತನ ನೋಡಲ್ಲಿ
ರೈತನ ನೇಗಿಲು ನೇತಲ್ಲಿ
ಟ್ರ್ಯಾಕ್ಟರ್ ಹರಿಸಿದ ಹೊಲದಲ್ಲಿ
ಆಧುನಿಕತೆಯ ದಿನದಲ್ಲಿ

ಎತ್ತು, ಏತ ನೆನಪಿನಲಿ
ನೀರು ಹರಿಯಲು ಪಂಪಿನಲಿ
ಬೀಜವ ಬಿತ್ತುವ ಕೈಯೆಲ್ಲಿ
ಬೆವರನು ಸುರಿಸುವ ಮೈಯೆಲ್ಲಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಗೊಬ್ಬರ ಹರಡಿತು ಯಂತ್ರವದು
ಅಗೋ ಔಷದಿ ಚಿಮ್ಮಿತು ತಂತ್ರವದು
ಹನಿ ನೀರಾವರಿ ಇಂದಿನ ನೀತಿ
ನೀರನು ಉಳಿಸುವ ನೂತನ ರೀತಿ

ಕಟಾವು ಮಾಡಲು ಜನ ಬೇಕಿಲ್ಲ
ಫಸಲು ಬರದಿರೆ ವಿಮೆ ಇದೆಯಲ್ಲ
ಪತ್ನಿಯು ತರುವಳು ಅನ್ನದ ಬುತ್ತಿ
ಬುಟ್ಟಿಯ ಹೊತ್ತಿ ಸಿಂಬಿಯ ಸುತ್ತಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಭೂಮಿಯಿಲ್ಲದ ರೈತರು ಉಂಟು
ಇವರಿಗೂ ಬೇಕು ಪುಕ್ಕಟೆ ಕರೆಂಟು
ಸಾಲ ಕಟ್ಟದೇ ಬ್ಯಾಂಕಿಗೆ ಖೋತ
ಸಾಲ ಮನ್ನಾ ಇವರ ನಿತ್ಯದ ಗಾಥ

ಅನ್ನವಿಲ್ಲದೆ ಸತ್ತ ಅನ್ನದಾತ
ಚಿನ್ನವನೇ ಬಿತ್ತ ಕನ್ನದಾತ
ಕಾಯವ ತೊರೆದ ಕಾಯಕಯೋಗಿ
ಮಣ್ಣನೆ ಕದಿಯೇ ನಾಯಕಭೋಗಿ

ಮಣ್ಣಿನ ಮಕ್ಕಳು ಇವರಂತೆ
ನುಣ್ಣನೆ ಬೋಳಿಸೋ ಕುಳವಂತೆ
ಬಿದ್ದರೂ ಮೀಸೆ ಮಣ್ಣಾಗದಂತೆ
ನುಣುಚಿಕೊಳ್ಳುವ ಗುಣವಂತೆ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ರೈತಗೆ ತೋರಿಸಿ ಧರಣಿಯ ಹಾದಿ
ಕೆಲವರು ಪಡೆದರು ಸೌಧದ ಗಾದಿ.

ರಚನೆ : ಡಾ. ಪ್ರಭಾಕರ ಬೆಲವಾಡಿ



ಬುಧವಾರ, ಮಾರ್ಚ್ 22, 2023

ಯುಗಾದಿ

ಯುಗಾದಿ ಬಂತು

ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ

ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ತೋರಣ ಕಟ್ಟೋಣ ತಾರವ್ವ ಬೇವು
ಚಿತ್ರಾನ್ನ ತಿನ್ನೋಣ ತುರಿಯೇ ಮಾವು

ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು

ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.

ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.

ರಚನೆ : ಡಾ. ಪ್ರಭಾಕರ ಬೆಲವಾಡಿ 

ಮಂಗಳವಾರ, ಮಾರ್ಚ್ 7, 2023

ಮುದುಕಿ , ನಾ ಕಂಡ ಮಹಿಳೆ


                            this photo courtesy PINTEREST 



 ಎಲ್ಲಿ ಹೋದೆ ಮುದುಕಿ

ನಿತ್ಯ ನೇಮದಿ ಬರುವಾಕಿ


ಬಾಯಾಗೆ ಎಲಿ ಅಡಿಕಿ
ಮೆಲ್ಲ ಮೆಲ್ಲನೆ ಮೆದುಕಿ
ಪಿಚ್ ಅಂತ ಉಗಳಾಕಿ
ಚೀಲ ಸೊಂಟಕ ನೂಕಿ

ಬುಟ್ಟಿಯಲಿ ಬೆರಣೀಯ ಹಾಕಿ
ತಲಿ ಮ್ಯಾಲ ಸಿಂಬಿಯನು ನೂಕಿ
ಊರೆಲ್ಲಾ ಮಾರುತಾ ತಿರುಗಾಕಿ
ಗೋಡೆಯ ಮೇಲೆ ಗೆರೆ ಬರದಾಕಿ

ಊರ ಸುದ್ದಿಯನೆಲ್ಲಾ ಹೇಳಾಕಿ
ಎಲಿ ಅಡಕಿ ಕೊಟ್ಟವರ ಹೊಗಳಾಕಿ
ಕೊಡದವರ ಉಗುಳುಗುಳಿ ತೆಗಳಾಕಿ
ಬುಟ್ಟಿ ಹಿಡಿದೆತ್ತವ್ವ ಮೇಲೆ ಅನ್ನಾಕಿ

ಎಲ್ಲಿ ಹೋದಿಯಬೇ ಮುದುಕಿ
ಮನಿ ಮುಂದೆ ಬಂದು ನಿಲ್ಲಾಕಿ
ಬೋಣಿ ನಿಮದೇರೀ ಅನ್ನಾಕಿ
ಬ್ಯಾಡೆಂದ್ರು ಒಟ್ಟಿ ಹೋಗ್ಯಾಕಿ.

ರಚನೆ ಡಾ. ಪ್ರಭಾಕರ ಬೆಲವಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...