ಬುಧವಾರ, ಸೆಪ್ಟೆಂಬರ್ 30, 2020

ಗಡಿಗೆಯ ಅಡಿಗೆ ಮತ್ತೊಂದು

 



ಓ ಆದಿ ಶಂಕರಾಚಾರ್ಯರೇ...

ಓ ಆದಿ ಶಂಕರಾಚಾರ್ಯ

ಧರ್ಮ ಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ

 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 1

                                                     

ತುಂಗಾ ತಟದ ಶೃಂಗ ಗಿರಿಯಲಿ

ಬದರಿ ಕೇದಾರದ ಹಿಮ ಗರ್ಭದಲಿ

ಜಗನ್ನಾಥನ ಪುರಿಯ ದ್ವಾರದಿ

ದ್ವಾರಕಾ ನಗರದ ಸುಂದರ ತಾಣದಿ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  6  

 

ಮಲ್ಲಿಗೆ ಹೂವು ಸುಮ ತರುವಂತೆ

ಕಾದ ಬೆಣ್ಣೆಯ ಘಮ ಬರುವಂತೆ

ವಸಂತ ಋತುವಿನ ಚಿಗುರಿನೆಲೆಯಂತೆ 

ಆಧ್ಯಾತ್ಮದ ಭಾವ ಚಿಮ್ಮುತ ಬನ್ನೀರಿ    

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  2

 

ಹಿಂದೂ ಧರ್ಮದ ಸಾರವ ಬೀರುತ

ಜಗಕೆ ಮುಕ್ತಿಯ ದ್ವಾರವ ತೋರುತ

ದಂಡವ ಪಿಡಿದು ಅಖಂಡ ಸುತ್ತುತ

ದಿನಕರ ಕೋಟಿ ತೇಜದಿ ಹೊಳೆಯುತ 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  7  

 

ಅತ್ತಿತ್ತಲುಗದೆ ಭಕ್ತರ ಮನದಲಿ

ನಿತ್ಯ ನಿರಂತರ ಸೂಕ್ತದ ವನದಲಿ

ಶಕ್ತಿಯೇ ತುಂಬಿಹ ನಿಮ್ಮಯ ಪದದಲಿ

ಸ್ತೋತ್ರ ಸಾಗರ ಹರಿಸುತ ಮುದದಲಿ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  3

 

ಕನಕಧಾರೆಯ ಬರೆಯುತ ಬನ್ನಿ

ಮನಕೆ ಮುದವನು ನೀಡಲು ಬನ್ನಿ

ಪಂಚಕಾಷ್ಟಕ ಶತಕಾಷ್ಟಕ ತನ್ನಿ

ಉಪನಿಷತ್ತುಗಳ ಸಾರವ ಪೇಳುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  8  

 

ಹೆಜ್ಜೆಯ ಮೇಲೊಂದ ಹೆಜ್ಜೆಯನಿಕ್ಕುತ

ಧರ್ಮದ ಗೆಜ್ಜೆಯ ನಾದವ ತೋರುತ

ಕಾಲಟಿಯಿಂದ ಕೇದಾರ ಸಾಗುತ

ಭವ್ಯ ಭಾರತವನೇ ಚಲಿಸುತ ಮೆರೆಯುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  4

 

ವಿಷ್ಣು ಲಲಿತೆಯರ ಸಹಸ್ರ ನಮಿಸಿ

ಸಂಖ್ಯೆಯಿಲ್ಲದ ಗ್ರಂಥವ ರಚಿಸಿ

ಶ್ರದ್ಧಾ ಭಕ್ತಿಯ ಸಾಗರ ಹರಿಸಿ

ಚೊಕ್ಕ ಭಕ್ತರ ನಿತ್ಯವೂ ಹರಸಲು 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....   9

 

ವಾದಿ ವಾದಗಳ ಮೆಟ್ಟಿ ನಿಲ್ಲುತ

ಅಧ್ವೈತ ವಾದದ ಗಟ್ಟಿಯ ತೋರುತ

ಪಂಡಿತೋತ್ತಮರ ದಿಘ್ಬ್ರಮೆಗೊಳಿಸುತ

ಸರ್ವಜ್ಞ ಪೀಠದ ಮೆಟ್ಟಿಲನೇರುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  5

 

ಓ ಆದಿ ಶಂಕರಾಚಾರ್ಯ

ಧರ್ಮ ಸಂರಕ್ಷಣಾರ್ಥಾಯ

ಸಂಭವಾಮಿ ಯುಗೇ ಯುಗೇ

 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  10  

 

ಇತಿ ಡಾ.ಪ್ರಭಾಕರ ವಿರಚಿತಆದಿಗುರು ಶಂಕರಾಚಾರ್ಯದಶಕಮಿದಂ ಲೋಕ ಸಮರ್ಪಣಂ. ಯಃ ಪಠೇಥ್ ನಿತ್ಯಂ, ಲಭತಿ ಸಕಲ ಸೌಭಾಗ್ಯಂ, ಶೃಣುಯಾತ್ ಖಚಿತಂ ನಿತ್ಯಾನಂದಂ, ಲಿಖಿತಂ ದಿವ್ಯ ನ್ನಿಧಿಂ.

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

11, ಚಿರಂಜೀವಿ, ಲಕ್ಕಣ್ಣ ಬಡಾವಣೆ, ಸುಬ್ರಮಣ್ಯಪುರ ರಸ್ತೆ, ಉತ್ತರಹಳ್ಳಿ, ಬೆಂಗಳೂರು 560001

ಸಂ: 94484 88910   ಇಮೇಲ್: prabhakarbelavadi@gmail.com 


ಶನಿವಾರ, ಸೆಪ್ಟೆಂಬರ್ 26, 2020

ಗಡಿಗೆಯ ಅಡಿಗೆ 3

🙈🙉🙊 ಜಗದೊಳು ಇದ್ದರೇನೋ, ಇರದಿದ್ದರೇನೋ? 🙀


 

ಮುದದಿ ಮಾಂಗಲ್ಯವನು ಕಟ್ಟಿ, ಮರುದಿನವೇ ತೌರಿಗೆ ಅಟ್ಟಿ,

ಪರಸತಿಯೊಳು ಮನವಿಟ್ಟಿ, ಆಕೆಯ ಅಂಗಾಂಗಗಳ ಮುಟ್ಟಿ,

ತೊಡೆಯ ತೋರುತ ತಟ್ಟಿ, ನಿಲ್ಲುವ ಈ ಮಲ್ಲ ಜಗಜಟ್ಟಿ,

ಜಗದೊಳು ಇದ್ದರೇನೋ, ಇರದಿದ್ದರೇನೋ?

 

ಮದಿರೆಯ ಹವ್ಯಾಸಿ, ಮಾನಿನಿಯ ಸಹವಾಸಿ, ಹೆಸರಿಗೆ ಸನ್ಯಾಸಿ,

ಬೆವರಿಳಿಸಿ, ಗಳಿಸಿ ಬಂಗಾರದ ಪದಕ, ವ್ಯರ್ಥ ಅಲೆಯುವ ಯುವಕ,

ಬಂದಾಗ ಕಷ್ಟ ಕಾರ್ಪಣ್ಯಗಳ ಸಮಯ, ದೂರ ಹೋಗುವ ಗೆಳೆಯ,

ಜಗದೊಳು ಇದ್ದರೇನೋ, ಇರದಿದ್ದರೇನೋ?

 

ಕಲಿತು ನೂರಾರು ತಂತ್ರ, ಹಾಕುತ ಗುರುವಿಗೇ ತಿರುಮಂತ್ರ,

ಮೂಗಿಗೇರಿಸುತ ನಶ್ಯ, ಗುರುವಿನ ಕಾಲನೆಳೆಯುವ ಶಿಷ್ಯ,

ಮತ ಪಡೆವಾಗಿನ ತವಕ, ಹಿತ ಮರೆತು ಮೆರೆವ ಈ ನಾಯಕ,

ಜಗದೊಳು ಇದ್ದರೇನೋ, ಇರದಿದ್ದರೇನೋ?

 

ಅತ್ತೆ ಮಾವಂದಿರ ಅನವರತ ಅಳಿಸಿ, ಕುಣಿವಂತ ಸೊಸಿ,

ಅಪ್ಪ ಅಮ್ಮಂದಿರ ಹತ್ರ, ಎಂದೂ ಬಾರದ ಸುಪುತ್ರ,

ನುಡಿಯುತ್ತಾ ನಾರಾಯಣ, ನಿತ್ಯ ಮಾಡುತ್ತಾ ಹಗರಣ,

ಜಗದೊಳು ಇದ್ದರೇನೋ, ಇರದಿದ್ದರೇನೋ?

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಹಳ್ಳಿ, ಬೆಂಗಳೂರು. ಕ್ಯಾಂಪ್ ಹೈದರಾಬಾದ್.

ಶುಕ್ರವಾರ, ಸೆಪ್ಟೆಂಬರ್ 25, 2020

ಗಡಿಗೆಯ ಅಡಿಗೆ 1 ಮತ್ತು 2

 

ಸವಿರುಚಿ 1 

ಪ್ರಭಾತೇ ಕರ ದರ್ಶನಂ

ಸಾಮಾನ್ಯವಾಗಿ ಎದ್ದ ತಕ್ಷಣ ನಾವು ಹೀಗೆ  ಶ್ಲೋಕವನ್ನು ಹೇಳಿಕೊಂಡು ನಮ್ಮ ಕೈಗಳನ್ನು ನೋಡಿಕೊಳ್ಳುವುದು ರೂಢಿಯಲ್ಲಿದೆ. 

"ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೇ ಸರಸ್ವತೀ, ಕರ ಮೂಲೇ ಸ್ತಿಥೇ ಗೌರೀ, ಪ್ರಭಾತೇ ಕರ ದರ್ಶನಂ."

ಹೀಗೂ ಹೇಳಿಕೊಳ್ಳಬಹುದಲ್ಲವೆಒಮ್ಮೆ ಅಂದುಕೊಂಡು  ನೋಡಿ.

"ಕರಾಗ್ರೇ ವಸತೇ ಬ್ರಹ್ಮ, ಕರ ಮಧ್ಯೇ  ಮಹಾ ವಿಷ್ನುಃ, ಕರ ಮೂಲೇ ಸ್ತಿಥೇ ಮಹೇಶ್ವರಃ,

ಕರ ಪೂರ್ಣಂ ಪರಬ್ರಹ್ಮಃ, ಪ್ರಭಾತೇ ಪವಿತ್ರ ಕರ ದರ್ಶನಂ."

        


 ಹೀಗೊಂದು ನಮ್ಮ ಸಲಹೆ.  ಏನಂತೀರಿ? ಮೆಚ್ಚಿಗೆಯಾದರೆ ಶೇರ್ ಮಾಡಿ.

********************************************************************

ಸವಿರುಚಿ 2 


ಅನಿಸುತಿದೆ ಏಕೋ ಇಂದು

 

ಅನಿಸುತಿದೆ ಏಕೋ ಇಂದು ಎಲ್ಲವೂ ವೈರಸ್ ಎಂದು,

ಪ್ರೇತದ ಲೋಕದಿಂದ ಕೊಲ್ಲಲೇ ಬಂದವಳೆಂದು

ಕೊಂಚ ದೂರ ನಿಲ್ಲು ನಲ್ಲೆ ಹಾಗೇ ಸುಮ್ಮನೇ.

 

ಅನಿಸುತಿದೆ ಏಕೋ ಇಂದು ಗಂಟಲು ಕೆರೆದಿದೆಯೆಂದು

ಆಗುತಿತ್ತು ಹೀಗೇ ಹಿಂದೂ ಹೋಗುತಿತ್ತು ಬಂದು ಬಂದು

ಆಹಾ ಏಕೋ ಏನೋ ಇಂದು ದುರುಳ ಈ ಯೋಚನೇ.

 

ಅನಿಸುತಿದೆ ಏಕೋ ಇಂದು ಮೂಗು ಸೋರುತಿಹುದು ಎಂದು  

ಬಾಲ್ಯದಿಂದಲೂ ಹರಿಯುತಿತ್ತು ಸುಮ್ಮನಿದ್ದೆ ಸೀತವೆಂದು

ಆಹಾ ಏಕೋ ಏನೋ ಇಂದು ಮರುಳ ಈ ವೇದನೇ

 

ಅನಿಸುತಿದೆ ಏಕೋ ಇಂದು ಮೈಯೆಲ್ಲಾ ಕಾದಿದೆಯೆಂದು

ಕಷಾಯವನ್ನೇ ಅಜ್ಜಿ ಕೊಟ್ಟಳಂದು ಕುಡಿಯಲೆಂದು   

ಆಹಾ ಏಕೋ ಏನೋ ಇಂದು ಈ ಕರುಳ ಯಾತನೇ.

 

ಅನಿಸುತಿದೆ ಏಕೋ ಇಂದು ಹೊಸ್ತಿಲ ದಾಟೆನೆಂದು

ಆಟ, ಪಾಠ, ಬಂದು, ಬಳಗ, ಕೂಟ, ನೋಟ ಬೇಡವೆಂದು

ಆಹಾ ಹೋಯ್ತು ವೈರಸ್ ನೋಡು, ಅಲ್ಲವೆಂದು ನಮ್ಮನೇ.

 

ಅನಿಸುತಿದೆ ಏಕೋ ಇಂದು ನೀ ನನ್ನ ಕೆಣಕ ಬಂದಿಹೆಯೆಂದು

ಮರೆತಿಹೆಯಾ ನೀನು ಈ ದೇಶ ಒಂದು ಗರ್ಭಗುಡಿಯೆಂದು

ಆಹಾ ತೊಲಗು ಬೇಗ ಬಿಟ್ಟು ನಿನ್ನ, ಈ ದುರಾಲೋಚನೇ.

 

ಅನಿಸುತಿದೆ ನೀನು ಇಂದು ತುಂಬಾ ಸೀರಿಯಸ್ ಎಂದು

ಚೀನಾವೆಂಬ ದೇಶದಿಂದ ಜಾರಿ ತೂರಿ ಬಂದಿಹೆಯೆಂದು

ಆಹಾ ಹಾಗೇ ಹಾರಿ ಹೋಗು ಕಾಣದಂತೆ ಗುಮ್ಮನೇ.

 

ಅನಿಸುತಿದೆ ಏಕೋ ಇಂದು ಮನೆಯೇ ಮಂತ್ರಾಲಯವೆಂದು

ಅಪ್ಪ, ಅಮ್ಮ, ಬಂಧು ಬಳಗ ಈ  ಬಾಳಿಗೆ ಆಸರೆಯೆಂದು

ಆಹಾ ಪ್ರೀತಿ ಪ್ರೇಮ ಒಲವು ನಲಿವು ಎಂಥಾ ಮಧುರ ಭಾವನೇ.

 

ಅನಿಸುತಿದೆ ಏಕೋ ಇಂದು ಕೊರೋನ ರಾಮ ಬಾಣವೆಂದು

ನಸು ನಗುತಾ ನಿಂತಿಹ ನೋಡು ದೇವ ತಾನೇ ಭುವಿಗೆ ಬಂದು

ಆಹಾ ಬಂದು ಸನಿಹ ನಿಲ್ಲು ನಲ್ಲೆ ಬಳಸಿ ಹಾಗೇ ಬೆಚ್ಚನೇ.

 

ರಚನೆ: 

🙏🙏🙏🙏🙏🙏

ಡಾ. ಪ್ರಭಾಕರ ಬೆಲವಾಡಿ, ನಿವೃತ್ತ ಪ್ರಾಧ್ಯಾಪಕರು,

11, ಚಿರಂಜೀವಿ, ವಾಸವಿ ಗುಡಿ ರಸ್ತೆ, ಸುಬ್ರಹ್ಮಣ್ಯಪುರ ಅಂಚೆ,

ಉತ್ತರಹಳ್ಳಿ, ಬೆಂಗಳೂರು 560061.


ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...