ಗುರುವಾರ, ಅಕ್ಟೋಬರ್ 15, 2020

ಶ್ರೀ ಕೃಷ್ಣನ ತುಲಾಭಾರ – ನೂತನ ಅವಿಷ್ಕಾರ

 

ಶ್ರೀ ಕೃಷ್ಣನ ತುಲಾಭಾರ – ನೂತನ ಅವಿಷ್ಕಾರ


ಅಂದು ಹುಣ್ಣಿಮೆ. ಬೆಳ್ಳನ ಬೆಳದಿಂಗಳಲ್ಲಿ ದ್ವಾರಕೆಯ ಅರಮನೆಯ ಅಂಗಳದಲ್ಲಿ ರುಕ್ಮಿಣಿ, ಸತ್ಯಭಾಮ ಮತ್ತು ಜಾಂಬುವತಿ ಪಗಡೆ ಆಡುತ್ತಾ ಸಂತೋಷದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದರು. ಅರಮನೆಗೆ ಬಂದಿದ್ದ ಅರ್ಜುನನನ್ನು ಪ್ರೀತಿಸಲು ಪ್ರಾರಂಭಿಸಿದ್ದ ಸುಭದ್ರೆಗೆ ಒಂದು ಸಂಶಯ ಮೂಡಿತು. ಈ ಪ್ರೀತಿಯನ್ನು ಅಳೆಯುವುದು ಹೇಗೆಂದು? ಈ ವಿಷಯದಲ್ಲಿ ಅನುಭವಿಗಳಾದ ಮೂವರನ್ನು ಕೇಳೋಣವೆಂಬ ಕುತೂಹಲದಿಂದ ಪಗಡೆ ಆಟದಲ್ಲಿ ಮಗ್ನರಾಗಿದ್ದ ಮೂವರ ಬಳಿ ಬಂದು ತನ್ನ ದುಗುಡವನ್ನು ಹೇಳಿಕೊಂಡಳು. ಈ ವಿಷಯದಲ್ಲಿ ಎಂದೂ ತಲೆ ಕೆಡೆಸಿಕೊಂಡಿರದ  ಆ ಮೂವರಿಗೂ ಕುತೂಹಲ ಮೂಡಿತು. ಹೌದಲ್ಲ, ತಾವು ಈ ಬಗ್ಗೆ ಗಮನವನ್ನೇ ಹರಿಸಿಲ್ಲ, ಈಗೇಕೆ ತಮ್ಮಲ್ಲಿ ಯಾರು ಕೃಷ್ಣನನ್ನು ಹೆಚ್ಚು ಪ್ರೀತಿಸುವವರು ಎಂದು ಪರೀಕ್ಷಿಸಬಾರದು ಎಂಬ ಜಿಜ್ನಾಸದಲ್ಲಿ ತೊಡಗಿದರು.

ಈಗ ಆಡುತ್ತಿರುವ ಪಗಡೆ ಆಟವೇ ನಿರ್ಣಾಯಕವಾಗಲಿ ಎಂಬ ಸಲಹೆ ಬಂತು. ಆದರೆ ಪಗಡೆ ಆಟದಿಂದ ಆದ ಅನಾಹುತಗಳ ದೃಶ್ಯ ಕಣ್ಣ ಮುಂದೆ ಬಂದು ಅದನ್ನು ಕೈ ಬಿಡಲಾಯಿತು. ಕೊನೆಗೆ ಸುಭದ್ರೆಯ ಸಲಹೆಯಂತೆ ಕೃಷ್ಣನ ತುಲಾಭಾರ ನಡೆಸಿ, ಈ ಮೂವರಲ್ಲಿ ಯಾರು ಅತಿ ಕಡಿಮೆ ವಸ್ತುಗಳನ್ನುಇಟ್ಟು ಕೃಷ್ಣನ ಭಾರವನ್ನು ಮೀರಿಸುತ್ತಾರೋ ಅವರು ಕೃಷ್ಣನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ನಿರ್ಧರಿಸಲಾಯಿತು. ಸರಿ ಮರುದಿನವೇ ತುಲಾಭಾರಕ್ಕೆ ಅಣಿಯಾಯಿತು.

ಶ್ರೀ ಕೃಷ್ಣ ಎಂದಿನಂತೆ ಮುಸುನಗುತ್ತಾ ತಕ್ಕಡಿಯ ಒಂದು ಭಾಗದಲ್ಲಿ ವಿರಾಜಮಾನನಾದನು. ಮತ್ತೊಂದೆಡೆ ಮೂವರಲ್ಲಿ ಯಾರು ಮೊದಲು ವಸ್ತುಗಳನ್ನು ಇಡಬೇಕೆಂಬ ಚರ್ಚೆ ಪ್ರಾರಂಭವಾಯಿತು. ಅಹಂಕಾರದಿಂದ ಮೆರೆಯುತ್ತಿದ್ದ ಸತ್ಯಭಾಮೆ ತಾನೇ ಹೆಚ್ಚು ಪ್ರೀತಿಸುವುದು, ಅದಕ್ಕೇ ಕೃಷ್ಣ ಪಾರಿಜಾತ ಗಿಡವನ್ನೇ ತನಗೆ ತಂದುಕೊಟ್ಟಿದ್ದು, ಆದ್ದರಿಂದ ತನಗೇ ಮೊದಲ ಆದ್ಯತೆ ಎಂದು ಪಟ್ಟು ಹಿಡಿದಳು. ಹಿರಿಯಳೂ ಮತ್ತು ಅತಿಯಾದ ವಿಶ್ವಾಸವಿದ್ದ ರುಕ್ಮಿಣಿ ಮುಗುಳ್ನಗುತ್ತಾ ಇದಕ್ಕೆ ಸಮ್ಮತಿಸಿದಳು. ಕಿರಿಯಳಾದ ಜಾಂಬುವತಿ ತನ್ನ ಪ್ರೀತಿಯ ಮೇಲೆ ನಂಬಿಕೆಯಿಟ್ಟು ಸುಮ್ಮನಾದಳು.

ಸತ್ಯಭಾಮೆ ಜಂಭದಿಂದ ಮೆರೆಯುತ್ತಾ ತನ್ನ ಬಳಿ ಸಂಗ್ರಹಿಸಿದ್ದ ವಸ್ತುಗಳನ್ನು ಒಂದೊಂದಾಗಿ ಇಡಲಾರಂಭಿಸಿದಳು. ಆಕೆಯ ಲಕ್ಷ್ಯ ಕೇವಲ ತಕ್ಕಡಿಯ ಏರಿಳಿತಗಳ ಕಡೆಯೇ ಕೇಂದ್ರೀಕೃತವಾಗಿತ್ತು. ಕೃಷ್ಣನ ಕಡೆ ತಿರುಗಿಯೂ ನೋಡಲಿಲ್ಲ. ಆಕೆಯ ಅಧೀನದಲ್ಲಿದ್ದ ಆಭರಣಗಳೂ ಸೇರಿ ಎಲ್ಲವನ್ನೂ ಇಟ್ಟರೂ ತಕ್ಕಡಿ ಮಣಿಯಲಿಲ್ಲ. ತಾನು ಧರಿಸಿದ್ದ  ಆಭರಣಗಳನ್ನೂಇಟ್ಟಿದ್ದಾಯಿತು. ಸಪ್ಪೆ ಮುಖ ಮಾಡಿಕೊಂಡ ಸತ್ಯಭಾಮೆ ಆಶ್ಚರ್ಯ ಚಕಿತಳಾದಳು.

ಈಗ ರುಕ್ಮಿಣಿಯ ಸರದಿ ಬಂತು. ತನ್ನ ಭಕ್ತಿಗೆ ಮೆಚ್ಚಿ ಅಪಹರಿಸಿ ಮದುವೆಯಾದ ಕೃಷ್ಣನನ್ನು ತನಗಿಂತ ಹೆಚ್ಚು ಪ್ರೀತಿಸಲು ಯಾರಿಗೆ ಸಾಧ್ಯ ಎಂಬ  ಅತಿಯಾದ ಆತ್ಮವಿಶ್ವಾಸದಿಂದ ಕೃಷ್ಣನ ಕಡೆ ಕಿರುನೋಟ ಬೀರಿ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಇಟ್ಟಳು. ತಕ್ಕಡಿ ಸ್ವಲ್ಪ ಅಲುಗಾಡಿತಾದರೂ ಕೃಷ್ಣನ ತೂಕಕ್ಕೆ ಸಮನಾಗಲಿಲ್ಲ. ಆದರೆ ಆಕೆ ಅಷ್ಟೊಂದು ವಿಚಳಿತಲಾಗಲಿಲ್ಲ. ಇದು ಕೃಷ್ಣನ ಲೀಲೆಗಳ ಒಂದು ಪುಟ್ಟ ಪ್ರಹಸನವೆಂದು ಸುಮ್ಮನಾದಳು.

ಅತ್ಯಂತ ಕಿರಿಯಳಾದ ಜಾಂಬುವತಿ ನಯವಿನಯದಿಂದ ಕೃಷ್ಣನ ಬಳಿ ಬಂದು, ಆತನನ್ನು ತಕ್ಕಡಿಯಿಂದ ಇಳಿಸಿ, ಪಾದ ಪೂಜೆ ಮಾಡಿ, ತನಗೆ ಆಶೀರ್ವದಿಸಬೇಕೆಂದು ಬೇಡಿಕೊಂಡಳು. ನಸುನಗುತ್ತಾ ಶ್ರೀ ಕೃಷ್ಣನು ಆಶೀರ್ವದಿಸಿ, ಆಕೆಗೆ ಈ ಹಿಂದೆ ಗಣೇಶನು ಕೇವಲ ಶಿವ-ಪಾರ್ವತಿಯರ ಸುತ್ತ ಪ್ರದಕ್ಷಿಣೆ ಹಾಕಿ ಸ್ಪರ್ಧೆ ಗೆದ್ದಿದ್ದನ್ನು ಸ್ಮರಣೆ ಮಾಡಿಕೊಳ್ಳುವಂತೆ ಮಾಡಿದನು. ಜೊತೆಗೆ ಪತಿ ಪತ್ನಿಯರ ಪ್ರೀತಿ, ಸ್ಪರ್ಧೆಗಳಲ್ಲಿ ಪ್ರದರ್ಶಿಸುವ ವಸ್ತುವಲ್ಲ ಎಂದು ಬುದ್ಧಿವಾದದ ಮಾತನ್ನು ಅರುಹಿದನು. ಇದನ್ನು ಗ್ರಹಿಸಿದ ಜಾಂಬುವತಿಯು ತಕ್ಕಡಿಯ ಮತ್ತೊಂದು ಭಾಗಕ್ಕೆ ಬಂದು, ವಸ್ತುಗಳನ್ನು ಇಡದೇ, ನಮ್ರತೆಯಿಂದ ಒಂದು ಧನ್ಯತೆಯ ‘ಮುತ್ತು’ ಕೊಟ್ಟು ತನ್ನೆಲ್ಲಾ ಪ್ರೀತಿಯನ್ನು ಕೃಷ್ಣನಿಗೆ ಒಪ್ಪಿಸಿದಳು.

ನೋಡು ನೋಡುತ್ತಿದ್ದಂತೆಯೇ ತಕ್ಕಡಿ ಕೆಳಗಿಳಿದು ಬಿಟ್ಟಿತು.

ವಿಜಯಿಯಾದ ಜಾಂಬುವತಿಯಿಂದ, ಕೃಷ್ಣ ಆಕೆಗೆ ಹೇಳಿದ ನೀತಿಯ ಮಾತುಗಳನ್ನು ಕೇಳಿದ ಸುಭದ್ರೆಗೆ ತನ್ನ ತಪ್ಪಿನ ಅರಿವಾಗಿ, ತನ್ನ ಅರ್ಜುನನ ಮೇಲಿನ ಪ್ರೀತಿಯನ್ನು ಓರೆಗಲ್ಲಿಗೆ ಹಚ್ಚುವ ಹುಚ್ಚನ್ನು ಬಿಟ್ಟುಬಿಟ್ಟಳು. ರುಕ್ಮಿಣಿ, ಸತ್ಯಭಾಮೆಯರ ಬಳಿ ಬಂದು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದಳು. ‘ಶ್ರೀ ಕೃಷ್ಣಾರ್ಪಣ ಮಸ್ತು.’

I acknowledge with thanks Pinterest and kshetrapuranas.wordpress.com for the photo of tulabhara.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...