ಮಂಗಳವಾರ, ಜನವರಿ 25, 2022

ಕಳಿಸೋ ನನ್ ತವರೀಗೆ


 

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

(ಜಾನಪದ ಗೀತೆ ರಚಿಸುವ ಪ್ರಥಮ ಪ್ರಯತ್ನ)

 

ಸತಿ:

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

 

ಪತಿ:

ಸಪ್ಪಿರದ ತವರೂರ ನಾನಿಂದು ಬಲ್ಲೇ  

ಅಪ್ಪಿಲ್ಲ, ಅವ್ವಿಲ್ಲ ಅಳಬೇಡ ನಲ್ಲೇ          

ಅಪ್ಪಿಕೊಳ್ಳೋರು ಅಲ್ಲಾರಿಹರೆ ಹೇ ನಲ್ಲೇ

ತಪ್ಪಿ ಕೂಡ ನಿನ್ ತವರ ನೆನಿಬೇಡ ನಲ್ಲೇ

ತೋರಿಸು ಅಲ್ಲೀಗ ನಿನ್ನೋರು ಇಹರಾರೇ?

 

ಸತಿ:

ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ

ಅಲ್ಲಿಹ ಸೊಬಗ ಬಣ್ಣಿಸಲಿ ನಿನಗೆ ಹೇಗೆ?
           

ಹೊಳೆಯ ಉದ್ದಗಲಕ್ಕೂ ತೆಂಗಿನಾ ತೋಟ               

ಅದರ ಹಿಂದಿಹುದು ಗಿರಿಯಂಚಿನಾ ನೋಟ

ನಟ್ಟ ನಡು ನಾ ಹಾಡೋಡಿ ಬರೋ ದ್ವಾರ

ನಾ ಹೀರುತ ಬರುವ ಅಪ್ಪನ ಯೆಳನೀರ

ಕರೆದಿಹುದೆನ್ನಾ ತವರೂರು, ಆ ನನ್ನ ನೆನೆಸಿನೂರು.

 
ಪತಿ:

ಮುದ್ದ ಮಾಡೋರು, ಬಿದ್ದರೆತ್ತೋರಿಲ್ಲಾ,

ಮುದ್ದೆ ಮಾಡಿ ನಿನಗಲ್ಲಿ ಹಾಕೋರಿಲ್ಲಾ   

ಎತ್ತಿ ತೂರೋರಿಲ್ಲ, ಅದು ನಿನ್ನ ತವರೂರಾ?

 

ಸತಿ:

ಹಚ್ಚ ಹಸಿರ ತೆನೆ, ಬಾಗಿರುವ ಬಾಳೆ ಗೊನೆ,

ಮೆಚ್ಚೆದ್ದು ಸುರಿವ ಹನಿಹನಿಯ ಮಳೆ ಸೋನೆ

ಜುಳು ಜುಳು ಹರಿವುದು ಹೊಳೆ ನಗುತಲಿ ತಾನೆ

ಬುಳುಬುಳನೆ  ನೆಗೆಯುವುದು ಮೀನು ತಂತಾನೆ

ಅಂತಹುದು ಕೇಳಯ್ಯ ನನ್ನ ತವರೂರು.


ಅಗಸಿಯ ದ್ವಾರ, ಗುಡಿ ಗೋಪುರ ನಿಂತಾವ

ತೆಂಗ ಗರಿ ತೂಗಿ, ತಲೆ ಬಾಗಿ ಕರಿತಾವ

ಗೋವುಗಳು ನಲಿದು ನೊರೆ ಹಾಲ ಕರೆದಾವ

ಅಂತಹುದು ನೋಡಯ್ಯ ನನ್ನ ತವರೂರು.


ಮಾವಿನ ಗಿಡದ ಕೊಂಬ್ಯಾಗ ಹಗ್ಗವ ಕಟ್ಟಿ

ನನಗೆಂದು ಕೂರೆ ಅದಕ ಕೋಲನೊಟ್ಟಿ,

ಮ್ಯಾಲಿಂದ ಕೆಳಗ ನನ್ನ ತೇಲಾಡ ಬಿಟ್ಟಿ

ಗೆಳತಿಯರೋ ಕುಣಿದಾರು ಚಪ್ಪಾಳೆ ತಟ್ಟಿ

ಅಂತಹುದು ಕೇಳಯ್ಯ ನನ್ನ ತವರೂರು.


ಕೆಸರಾಗ ಜಾರಿ, ಕೆರಿಯಾಗ ತಾ ಹಾರಿ

ಮೇಲಕ್ಕ ಚಡ್ಡಿಯ, ರೊಯ್ಯಂತ ತಾ ತೂರಿ

ನಗತಾನ ಪೋರ, ತನ್ನ ಹಲ್ಲನ್ನು ಬೀರಿ                                                 

ನಗತಾಳ ಪೋರಿ, ಕೆರಿ ದಂಡೆಯನು ಏರಿ

ಕಳಿಸಯ್ಯ ನನ್ನಿನಿಯ ಅಂತ ತವರೀಗೆ.


ದುಂಡು ಮಲ್ಲಿಗೆ ಮಾಲೆಗೆ ಏತಕೆ ಕಾಸು

ಅಕ್ಕ ಪಕ್ಕದವರ ಅಕ್ಕರೆಯೇ ಸೊಗಸು

ಗುಬ್ಬಿಗಳ ಚಿಲಿಪಿಲಿ ಇಲ್ಲ್ಹೆಂಗೆ ಬರತಾವ

ಅಲ್ಲಿ ಅಂಗಳದಾಗ ಆಡುತ ಇರ್ತಾವ

ಕಳಿಸಯ್ಯ ನನ್ನಿನಿಯ ಅಂತ ತವರೀಗೆ.
   

ಉಂಡು ಬರುವೆನೊಮ್ಮೆ ತವರೂರ ಶೃಂಗಾರ

ಕಂಡು ಬರುವೆನು ಒಮ್ಮೆ ನನ್ನ ತವರೂರ

ಪ್ರತಿನಿತ್ಯ ಬೀಳುತಿದೆ ತವರಿನ ಕನಸು

ಭಾಗ್ಯದ ಓ ಸರದಾರ ತಡವೇಕೆ ಕಳಿಸು

ಯಾರಿರಲಿ, ಇರದಿರಲಿ, ಅದೇ ತವರೂರ 

 

ಪತಿ:

ಇದ್ದರಿರಲೇಕೆ ನಲ್ಲೆ ಅದು ಬಲು ದೂರ

ಇದ್ದರಿರಲೇಕೆ ನನಗಿಲ್ಲಿ ಬೇಸಾರ

ನೋಡಿ ಬಾ ನಲ್ಲೆ ಅಂತಿರುವ ತವರೂರ

ನೋಡಿ ಬಾ ನಲ್ಲೆ ನೀ ನಿನ್ನ ಕನಸೂರ.

 

ಸತಿ:                                                    

ತಂಗಳುಣ್ಣದಿರು, ನೀ ಮದಿರೆ ಮುಟ್ಟದಿರು

ಎಂಜಲಿಗೆ ನೀನೆಂದೂ ಕೈ ಹಾಕದಿರು

ಚಂಚಲತೆಯ ಓ ನನ್ನೊಲುಮೆ ಬಂಗಾರ 

ನೋಡೋಡಿ ಬರುವೆ ನಾ ನನ್ನ ತವರೂರ

 

ದಿನನಿತ್ಯ ಬರುವಳು ನೋಡಯ್ಯ ಕೆಲಸದಾಕೆ

ಜಾರೀತು ನಿನ ಪಂಚೆ ಇನಿಯ ಬಲು ಜೋಕೆ

ಅತ್ತ ಏರುತಿರೆ ಈ ತವರೂರ ಬಯಕೆ

ಇತ್ತ ಕಾಡುತಿದೆ ನನ್ನ ನಲ್ಲನಾರೈಕೆ

 

ತವರೂರ ಮುಟ್ಟಿ, ರಂಗೋಲಿಯ ಇಟ್ಟಾಕೆ

ಹೀಂಗ ಹೋಗಿ ಹಾಂಗ ಓಡೋಡಿ ಬರುವಾಕೆ.

 

ಹೋಗಿ ಬರುವೇ ನಾನೀಗ ನನ್ ತವರೀಗೆ

ಹೋಗಿ ಬರುವೇ ನಾನೀಗ ನನ್ ತವರೀಗೆ.

 

 

ಕರ್ತೃ: ಡಾ. ಪ್ರಭಾಕರ್ ಬೆಲವಾಡಿ

(ಭಾಗ್ಯದ ಬಳೆಗಾರ ಜಾನಪದ ಗೀತೆಯ ಕರ್ತೃವಿಗೆ ನಮಿಸುತ್ತಾ)

Thanks to Pinterest for the picture.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...