ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಅಕ್ಟೋಬರ್ 20, 2024

ಮುಕ್ತಿ

 

ಮುಕ್ತಿ  

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮಾ 

ಮಂಗಳವಾರ, ಜುಲೈ 9, 2024

ಅಮ್ಮನ ಒಲವು

 ಅಮ್ಮನೊಲವು

 


 image courtesy Pinterest 


ಮರದ ಮೇಲೊಂದು ಕುಳಿತಿತ್ತು ಹಕ್ಕಿ

ರೆಕ್ಕೆ ಬಡಿಯುತ್ತಿತ್ತು ಖುಷಿಯಿಂದ ಉಕ್ಕಿ  

ಅದಕೊಂದು ಮಾಗಿದ ಮಾವಿನ ಹಣ್ಣು ಸಿಕ್ಕಿ

ತಿನ್ನ ಬಯಸಿತ್ತು ತನ್ನ ಕೊಕ್ಕಿನಿಂದ ಹೆಕ್ಕಿ ಕುಕ್ಕಿ.

 

ನೆನೆದು ಬಳಗವ ಕೂಗಲದು ‘ಚಿಕ್ ಚಿಕ್ ಚಿಕುವು’

ಬಂದವಗೋ ಮರಿಗಳು ಹಾಡುತ ‘ಚಿವ್ ಚಿವ್ ಚಿವು’

ನೀಗಿಸಿಲು ಆ ಮಾವು ತಮ್ಮಯ ಉದರದ ಹಸಿವು

ಕುಣಿದವಗೋ ಮರಿಬಳಗ ಮೆಚ್ಚಿ ಅಮ್ಮನಾ ಒಲವು.

 

ಅಮ್ಮನೇ ಗೆಲುವು, ಅಮ್ಮನಿರೆ ಬಲು ಚೆಲುವು

ಅಮ್ಮನಿರಲು ಎಮಗೆ ಅನುದಿನವೂ ಬಲವು

ಅಮ್ಮನಪ್ಪಿದರೆ ಹಾರಿ ಹೋಗದಿರದೇ ನೋವು

ಅಮ್ಮನಿರೆ ಗರಿಗೆದರಿ ದೂರ ಹಾರ ಬಲ್ಲೆವು ನಾವು.

 

ರಚನೆ: ಡಾ. ಬೆಳವಾಡಿ ಪ್ರಭಾಕರ್

prabhakarbelavadi@gmail.com

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಭಾನುವಾರ, ಜೂನ್ 30, 2024

pixel ನಲ್ಲಿ deb dutta ಇವರಿಗೆ ಧನ್ಯವಾದಗಳು 

 

ಚಿಟ್ಟೆ ಚಿಟ್ಟೆ

 

ಬೆರಳಿನ ಮುಂದೆ ಗೋಲಿಯು ಇತ್ತು

ನನ್ನಯ ಗಮನ ಗುರಿಯ ಮೇಲಿತ್ತು

ಎದುರಿಗೆ ಇದ್ದವು ಹಲವಾರು ಗೋಲಿ

ನನಗೆ ಬೇಕಿತ್ತು ಆ ಬಣ್ಣದ ಗೋಲಿ

 

ಬೆರಳನು ಬಾಗಿಸಿ ರೊಯ್ಯನೆ ಬಿಟ್ಟೆ

ಹಾರುತ ಬಂದಿತು ಬಣ್ಣದ ಚಿಟ್ಟೆ

ಗೋಲಿಯ ರಭಸಕೆ ತಗುಲಿತು ರೆಕ್ಕೆ

ಅಳುತಲಿ ನಿಂದೆ ದುಃಖವು ಉಕ್ಕೆ

 

ತಿಳಿಯದೆ ಆಯಿತೆ ಚಿಟ್ಟೆಗೆ ಪೆಟ್ಟು  

ಕ್ಷಣದಲಿ ಕಂಡೆನು ಚಿಟ್ಟೆಯ ಗುಟ್ಟು

ಬಿದ್ದಿಹ ಚಿಟ್ಟೆ ನೋಡದೋ ಪಕ್ಕ

ನೋಡಲು ಹೋದರೆ ಹಾರಿತೆ ಠಕ್ಕ!

 

ರಚನೆ: ಡಾ. ಬೆಳವಾಡಿ ಪ್ರಭಾಕರ್

ಊರ ಕನ್ನಿಕೆ ಊರ ಬಯಕೆ

  ಊರ ಕನ್ನಿಕೆ ಊರ ಬಯಕೆ  ಡಾ ಬೆಳವಾಡಿ ಪ್ರಭಾಕರ್  ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...