ಭಾನುವಾರ, ಜೂನ್ 30, 2024

 ಹನಿಕವನಗಳು

Thanks to Petal Republic 

ಲೀಲೆ

 

ಗಾಳಿಗೂ ಶಕ್ತಿ ಇದೆಯಂತೆ  

ಜೇನಿನ ದಾಳಿಯ ತರವಂತೆ

ಘಮವನು ಹೂವು ತೋರಿಸದು

ಮೂಗಿಗೆ ಸುಮವು ಸೂಸುವುದು




ಮಳೆ ನೀರು

ಮೆಟ್ಟಲ ಮೇಲೆ ಬೀಳುತ್ತಿತ್ತು  

ಮುತ್ತಿನ ಮಣಿಗಳ ತರವಿತ್ತು

ಬಿದ್ದರು ತಾನೇ ನಲಿದಿತ್ತು

ಮುತ್ತಿನ ರೂಪ ತಾಳಿತ್ತು 


ರಚನೆ: ಡಾ. ಬೆಳವಾಡಿ ಪ್ರಭಾಕರ್


pixel ನಲ್ಲಿ deb dutta ಇವರಿಗೆ ಧನ್ಯವಾದಗಳು 

 

ಚಿಟ್ಟೆ ಚಿಟ್ಟೆ

 

ಬೆರಳಿನ ಮುಂದೆ ಗೋಲಿಯು ಇತ್ತು

ನನ್ನಯ ಗಮನ ಗುರಿಯ ಮೇಲಿತ್ತು

ಎದುರಿಗೆ ಇದ್ದವು ಹಲವಾರು ಗೋಲಿ

ನನಗೆ ಬೇಕಿತ್ತು ಆ ಬಣ್ಣದ ಗೋಲಿ

 

ಬೆರಳನು ಬಾಗಿಸಿ ರೊಯ್ಯನೆ ಬಿಟ್ಟೆ

ಹಾರುತ ಬಂದಿತು ಬಣ್ಣದ ಚಿಟ್ಟೆ

ಗೋಲಿಯ ರಭಸಕೆ ತಗುಲಿತು ರೆಕ್ಕೆ

ಅಳುತಲಿ ನಿಂದೆ ದುಃಖವು ಉಕ್ಕೆ

 

ತಿಳಿಯದೆ ಆಯಿತೆ ಚಿಟ್ಟೆಗೆ ಪೆಟ್ಟು  

ಕ್ಷಣದಲಿ ಕಂಡೆನು ಚಿಟ್ಟೆಯ ಗುಟ್ಟು

ಬಿದ್ದಿಹ ಚಿಟ್ಟೆ ನೋಡದೋ ಪಕ್ಕ

ನೋಡಲು ಹೋದರೆ ಹಾರಿತೆ ಠಕ್ಕ!

 

ರಚನೆ: ಡಾ. ಬೆಳವಾಡಿ ಪ್ರಭಾಕರ್

ಗುರುವಾರ, ಮಾರ್ಚ್ 23, 2023

ಆಧನಿಕ ರೈತ

ಆಧನಿಕ ರೈತ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಅನ್ನವ ನೀಡುವ ಅನ್ನದಾತ
ಕನ್ನವ ಹಾಕುವ ಕನ್ನದಾತ

ಉಳುವಾ ರೈತನ ನೋಡಲ್ಲಿ
ರೈತನ ನೇಗಿಲು ನೇತಲ್ಲಿ
ಟ್ರ್ಯಾಕ್ಟರ್ ಹರಿಸಿದ ಹೊಲದಲ್ಲಿ
ಆಧುನಿಕತೆಯ ದಿನದಲ್ಲಿ

ಎತ್ತು, ಏತ ನೆನಪಿನಲಿ
ನೀರು ಹರಿಯಲು ಪಂಪಿನಲಿ
ಬೀಜವ ಬಿತ್ತುವ ಕೈಯೆಲ್ಲಿ
ಬೆವರನು ಸುರಿಸುವ ಮೈಯೆಲ್ಲಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಗೊಬ್ಬರ ಹರಡಿತು ಯಂತ್ರವದು
ಅಗೋ ಔಷದಿ ಚಿಮ್ಮಿತು ತಂತ್ರವದು
ಹನಿ ನೀರಾವರಿ ಇಂದಿನ ನೀತಿ
ನೀರನು ಉಳಿಸುವ ನೂತನ ರೀತಿ

ಕಟಾವು ಮಾಡಲು ಜನ ಬೇಕಿಲ್ಲ
ಫಸಲು ಬರದಿರೆ ವಿಮೆ ಇದೆಯಲ್ಲ
ಪತ್ನಿಯು ತರುವಳು ಅನ್ನದ ಬುತ್ತಿ
ಬುಟ್ಟಿಯ ಹೊತ್ತಿ ಸಿಂಬಿಯ ಸುತ್ತಿ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ

ಭೂಮಿಯಿಲ್ಲದ ರೈತರು ಉಂಟು
ಇವರಿಗೂ ಬೇಕು ಪುಕ್ಕಟೆ ಕರೆಂಟು
ಸಾಲ ಕಟ್ಟದೇ ಬ್ಯಾಂಕಿಗೆ ಖೋತ
ಸಾಲ ಮನ್ನಾ ಇವರ ನಿತ್ಯದ ಗಾಥ

ಅನ್ನವಿಲ್ಲದೆ ಸತ್ತ ಅನ್ನದಾತ
ಚಿನ್ನವನೇ ಬಿತ್ತ ಕನ್ನದಾತ
ಕಾಯವ ತೊರೆದ ಕಾಯಕಯೋಗಿ
ಮಣ್ಣನೆ ಕದಿಯೇ ನಾಯಕಭೋಗಿ

ಮಣ್ಣಿನ ಮಕ್ಕಳು ಇವರಂತೆ
ನುಣ್ಣನೆ ಬೋಳಿಸೋ ಕುಳವಂತೆ
ಬಿದ್ದರೂ ಮೀಸೆ ಮಣ್ಣಾಗದಂತೆ
ನುಣುಚಿಕೊಳ್ಳುವ ಗುಣವಂತೆ

ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ರೈತಗೆ ತೋರಿಸಿ ಧರಣಿಯ ಹಾದಿ
ಕೆಲವರು ಪಡೆದರು ಸೌಧದ ಗಾದಿ.

ರಚನೆ : ಡಾ. ಪ್ರಭಾಕರ ಬೆಲವಾಡಿ



ಬುಧವಾರ, ಮಾರ್ಚ್ 22, 2023

ಯುಗಾದಿ

ಯುಗಾದಿ ಬಂತು

ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ

ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ತೋರಣ ಕಟ್ಟೋಣ ತಾರವ್ವ ಬೇವು
ಚಿತ್ರಾನ್ನ ತಿನ್ನೋಣ ತುರಿಯೇ ಮಾವು

ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು

ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.

ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.

ರಚನೆ : ಡಾ. ಪ್ರಭಾಕರ ಬೆಲವಾಡಿ 

ಮಂಗಳವಾರ, ಮಾರ್ಚ್ 7, 2023

ಮುದುಕಿ , ನಾ ಕಂಡ ಮಹಿಳೆ


                            this photo courtesy PINTEREST 



 ಎಲ್ಲಿ ಹೋದೆ ಮುದುಕಿ

ನಿತ್ಯ ನೇಮದಿ ಬರುವಾಕಿ


ಬಾಯಾಗೆ ಎಲಿ ಅಡಿಕಿ
ಮೆಲ್ಲ ಮೆಲ್ಲನೆ ಮೆದುಕಿ
ಪಿಚ್ ಅಂತ ಉಗಳಾಕಿ
ಚೀಲ ಸೊಂಟಕ ನೂಕಿ

ಬುಟ್ಟಿಯಲಿ ಬೆರಣೀಯ ಹಾಕಿ
ತಲಿ ಮ್ಯಾಲ ಸಿಂಬಿಯನು ನೂಕಿ
ಊರೆಲ್ಲಾ ಮಾರುತಾ ತಿರುಗಾಕಿ
ಗೋಡೆಯ ಮೇಲೆ ಗೆರೆ ಬರದಾಕಿ

ಊರ ಸುದ್ದಿಯನೆಲ್ಲಾ ಹೇಳಾಕಿ
ಎಲಿ ಅಡಕಿ ಕೊಟ್ಟವರ ಹೊಗಳಾಕಿ
ಕೊಡದವರ ಉಗುಳುಗುಳಿ ತೆಗಳಾಕಿ
ಬುಟ್ಟಿ ಹಿಡಿದೆತ್ತವ್ವ ಮೇಲೆ ಅನ್ನಾಕಿ

ಎಲ್ಲಿ ಹೋದಿಯಬೇ ಮುದುಕಿ
ಮನಿ ಮುಂದೆ ಬಂದು ನಿಲ್ಲಾಕಿ
ಬೋಣಿ ನಿಮದೇರೀ ಅನ್ನಾಕಿ
ಬ್ಯಾಡೆಂದ್ರು ಒಟ್ಟಿ ಹೋಗ್ಯಾಕಿ.

ರಚನೆ ಡಾ. ಪ್ರಭಾಕರ ಬೆಲವಾಡಿ

ಭಾನುವಾರ, ನವೆಂಬರ್ 27, 2022

ನೊಂದ ಹಸುಳೆಯ ಅಳಲು

 ನೊಂದ ಹಸುಳೆಯ ಅಳಲು

  image courtesy pinterest

ಪಲ್ಲವಿ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಚರಣಂ 1

ಪಾಂಡಿತ್ಯ ನಿಪುಣ ನೀ ಶಿಕ್ಷಕ, ಮೈಮನಮುಟ್ಟುವ ಪಾಠದ ಶಿಕ್ಷಕ

ಬಲು ಸಂಭ್ರಮದಿ ಬಂದಿಹೆ ಶಿಕ್ಷಕ, ವಿಧ್ಯೆ ಪ್ರಧಾಯಿಸೆನಗೆ ಓ ಶಿಕ್ಷಕ

ಚರಣಂ 2

ಜೀವಶಾಸ್ತ್ರವ ಕಲಿಸುವೆನೆಂದೆ, ಅದ ಬಣ್ಣಿಸಲು ಬತ್ತಲೆಯಾಗೆಂದೆ

ಮುಟ್ಟಲು ನೀ ನನ್ನಂಗಾಗಗಳ ಒಂದೊಂದೆ, ಪುಳಕಿತಳಾಗಿ ನಾನಿಂದೆ

ಚರಣ 3

ಇದು ಪಾಠದ ನೆಪದ ಆಟವೋ, ನಿನ್ನ ದಾಹಕೆ ಸಹಪಾಟವೋ

ನನ್ನಂಗದಿ ಆಡಿದ ಚೆಲ್ಲಾಟವೋ, ನರಿಯೊಬ್ಬನ ನನ್ನೊಡನಾಟವೋ

ಚರಣ 4

ಅಭಯ ಹಸ್ತದ ರಕ್ಷೆಯನಿಟ್ಟೆ, ಅಳಿಸಲಾಗದ ಶಿಕ್ಷೆಯ ಕೊಟ್ಟೆ

ಶಿಕ್ಷಕ ನೀನೆಂದು ನಂಬಿದೆ, ಘೋರ ಭಕ್ಷಕನಾಗಿ ನೀನಿಂದು ನಿಂದೆ

ಮಂಗಳ

ಗುರವೇ ದೇವ, ಗುರವೇ ವೈಭವ, ಗುರುಗಳೇ ಜಗದ ಜೀವ,

ಶಿಕ್ಷಕರೇ ನೀವ್ ಭಕ್ಷಕರಾಗದೆ, ನಂಬಿದ ಹಸುಳೆಗೆ ನೀಡುವ ಅಭವ.

 

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಸಂ: 94 48 48 89 10  



ಬುಧವಾರ, ಜನವರಿ 26, 2022

ಮುರಳಿ ನಾದ ಸುರಳಿ (ಅಷ್ಟಪದಿ) (ಆದ್ಯಂತ ಪ್ರಾಸ ಸಮಮಾತ್ರೆ)

 


Photo courtesy Pinterest


ಮುರಳಿ ನಾದ ಸುರಳಿ (ಅಷ್ಟಪದಿ) (ಆದ್ಯಂತ ಪ್ರಾಸ ಸಮಮಾತ್ರೆ)

 

ಅರಳಿ ಮರವನೇರಿ, ಕುಳಿತ ನೋಡು ನಮ್ಮ ಮುರಳಿ

ಮುರಳಿ ತನ್ನ ಲಹರಿಯಲ್ಲಿ, ನುಡಿಸುತಿದ್ದ ಮುರಳಿ

ಅರಳಿ ಮರದ ಎಲೆಗಳೆಲ್ಲ, ಕುಣಿಯುತಿತ್ತು ಅರಳಿ

ಮುರಳಿ ನಾದ ತೇಲುತಿರಲು, ರಾಧೆ ಮನವು ಅರಳಿ

ಮುರಳಿನಾದ ಸೆಳೆಯುತಿರಲು, ರಾಧೆ ಪಾದ ತೆರಳಿ

ಮುರಳಿ ನುಡಿಸುತಿದ್ದ ಮುರಳಿ, ರಾಧೆಯತ್ತ ಹೊರಳಿ

ಅರಳಿ ಮುರಳಿ ಕೊಟ್ಟ, ಪ್ರೀತಿಯೆಂಬ ನಾದಸುರಳಿ

ಮರಳಿ ಮುದದಿ ನೆನೆದಿರುವಳು, ಮನದಿ ರಾಧೆ ಅರಳಿ.


ರಚನೆ: ಡಾ.ಪ್ರಭಾಕರ್ ಬೆಲವಾಡಿ 

ಊರ ಕನ್ನಿಕೆ ಊರ ಬಯಕೆ

  ಊರ ಕನ್ನಿಕೆ ಊರ ಬಯಕೆ  ಡಾ ಬೆಳವಾಡಿ ಪ್ರಭಾಕರ್  ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...