ಶನಿವಾರ, ಏಪ್ರಿಲ್ 17, 2021

“ಅಂತಿಂತ ತ್ರಾಸು ಇದು ಅಲ್ಲ”

 


“ಅಂತಿಂತ ತ್ರಾಸು ಇದು ಅಲ್ಲ”

ಸುಮಾರು ಐವತ್ತು ವರ್ಷಗಳ ಹಿಂದೆ

ಬಸ್ಸಿನಲಿ ಪಯಣ ಬೆಂಗಳೂರಿನಿಂದೆ,

ಕಿಡಕಿಯ ಪಕ್ಕದಾಸನ ಕುಳಿತೆ,

ಬಂದಳು ಹದಿನೆಂಟರ ವನಿತೆ,

“ನಾನಲ್ಲಿ” ಅಂದಳು ಮುಸುನಗುತೆ.

.............

ಪಯಣ ಸಾಗುತ್ತಿತ್ತು, ಕಾವೇರುತ್ತಿತ್ತು,

ಕರವಸ್ತ್ರ ಹಣೆಯ ನೇವರಿಸುತ್ತಿತ್ತು,

“ಕಿಡಕಿ ಸರಿಸಲೇ” ಎಂದಳಾ ವನಿತೆ,

ತಿಳಿಗಾಳಿ ತೇಲುತ ಒಳಗೆ ಬರುತೆ,

ಅನಿಸಿತ್ತು ಈಕೆಯದದೆಂತಹ ನಡತೆ.

............

ಕ್ಷಣಗಳು ಕಳೆದಿತ್ತು, ಹೆರಳು ತಾಗಿತ್ತು,

ಆಕೆಯ ತಲೆಯು ನನ್ನತ್ತ ಬಾಗಿತ್ತು,

ನನ್ನ ಭುಜವೇ ಸುಪ್ಪತ್ತಿಗೆಯಾಗಿತ್ತು,

ಕೋಮಲ ಕೂದಲೇ ತಲೆದಿಂಬಾಗಿತ್ತು,

ಹೆರಳಂಚು ಮೀಸೆಗೆ ಕಚುಗುಳಿಯಿಟ್ಟಿತ್ತು.

..........

“ಹತ್ತು ನಿಮಿಷ ಚಹಾ ಟೈಮ್ ಅದ ನೋಡ್ರೀ,”

ನಿರ್ವಾಹಕ ಅಂದ, “ಕುಡಿದು ಲಘೂನ ಬನ್ರೀ.”

ನನಗೋ ಚಹಾದ ಚಟ, ಈಕೆಗೆ ನಿದ್ರೆಯ ಆಟ,

ಕಿಡಕಿ ತೆಗೆದಾಕೆಯ ನಡತೆ, ನನಗದಂದು ಪಾಠ,

ಗೆದ್ದಿತ್ತು ಯೋಗಿಯ ಹಠ, ಇದ್ದರೂ ತೊಳಲಾಟ.

............

ಪಯಣ ಸಾಗಿತ್ತು, ಚಿತ್ತಕೆ ಪಿತ್ತವೇರಿತ್ತು,

ನನಗೂ ನಿದ್ದೆಯ ಜೋಂಪು ಮೆಲ್ಲಗೇರುತ್ತಿತ್ತು,

ನಾಲಿಗೆ “ಸೌಂದರ್ಯ ಲಹರಿ” ಗುನುಗುತ ನಲಿದಿತ್ತು,

ಮೈಮನದಲ್ಲೆಲ್ಲಾ “ಆನಂದ ಲಹರಿ” ಆವರಿಸಿತ್ತು,

ಹೃದಯ ಸಂಸ್ಕಾರ, ಚಿತ್ತ ಮನೋಹಾರ ಆಗುತ್ತಿತ್ತು.

............

“ಧಾರವಾಡ ಬಂತ ಇಳೀರಿ, ಲಗೇಜ್ ಜೋಪಾನ್ರೀ,”

ನಿರ್ವಾಹಕನ ಧ್ವನಿ ಮತ್ತ ಜೋರಾಗ ಬಂತ ನೋಡ್ರೀ,

ಎದ್ದರೆ, ತಲಿ ಆಕಿಯತ್ತ, ಆಕಿಯ ತಲಿ ನನ್ನತ್ತ ಬಾಗಿತ್ತ,

ಮೈಮರೆತ ನನ್ನ ಕೈಯಾಗ ಆಕಿ ವ್ಯಾನಿಟಿ ಬ್ಯಾಗ್ ಇತ್ತ,

ನಸುನಗುತ ತಳ್ಳಿದಳು ನನ್ನ ಕೈಯ ಮೆಲ್ಲನೊತ್ತಿ ನನ್ನತ್ತ.

...........

ತುಟಿ ಕಚ್ಚಿ, ನಗು ಮುಚ್ಚಿ ಅಂದಳು ಆಕೆ, “ಪಾಪ ತ್ರಾಸ ಕೊಟ್ನಲ್ಲ”,

ನಾ ಅಂದ, “ಅಂತಿಂತ ತ್ರಾಸು ಇದು ಅಲ್ಲ, ಇದರಂತ ತ್ರಾಸ ಮತ್ತಿಲ್ಲ”,

ಆಕೆಯನು ತಲೆತಗ್ಗಿಸಿ ಭಾರದಿಂದ ಬೆರಳಂಚಿನಲಿ ಬೈ ಹೇಳಿ ಬೀಳ್ಕೊಟ್ಟೆ,

ಆದರೇಕೋ ತಿಳಿಯದು ಆಕೆಯನ್ನು ಮನಸಲ್ಲೇ ಬಚ್ಚಿಟ್ಟೆ, ಕಟ್ಟಿಟ್ಟೆ,

ಐವತ್ತು ವರ್ಷಗಳ ನಂತರ ವಾಯು ವಿಹಾರಕ್ಕೆಂದು ಇಂದು ಹೊರ ಬಿಟ್ಟೆ.

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಹಳ್ಳಿ, ಬೆಂಗಳೂರು. ಕ್ಯಾಂಪ್ ಹೈದರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...