ಮಂಗಳವಾರ, ಅಕ್ಟೋಬರ್ 13, 2020

ನೀತಿ ರಾಮಾಯಣ ಒಂದು ಹೊಸ ಕೊಂಡಿ

“ನೀತಿ ರಾಮಾಯಣ” 




ಅವಧೂತ ಪುರಾಣಿಕರು ಕಂದ ಪುರಾಣದ ಮತ್ತೊಂದು ಕಥೆಯನ್ನು ಆಂಜನೇಯನ ಭಕ್ತಾದಿಗಳ ಶ್ರೇಯಸ್ಸಿಗಾಗಿ ಹೇಳಲಾರಂಭಿಸಿದರು.

ಹರಿಕಥೆ 

ಬೆಲಗೂರಿನ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ನೆರೆದಿರುವ ಭಕ್ತಾದಿಗಳೆ ಕೇಳುವಂತವರಾಗಿ, ದಿವ್ಯ ಸ್ವರೂಪಿಯಾದ ವಿಷ್ಣುವು ಲೋಕಕಲ್ಯಾಣಕ್ಕಾಗಿ ಸಂಭವಾಮಿ ಯುಗೇ ಯುಗೇ ಎನ್ನುವಂತೆ ದಶಾವತಾರಗಳನ್ನು ಎತ್ತಿದ್ದು ತಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ನಾವೆಲ್ಲಾ ಭಕ್ತಿಯಿಂದ ಪೂಜಿಸುವ ಹಾಗೂ ಆಂಜನೇಯನ ಹೃದಯ ದೇವತೆಯಾದ ಶ್ರೀರಾಮನ ಅವತಾರವೂ ಒಂದು. ಈ ಅವತಾರ ಹೇಗಾಯಿತು, ಎಲ್ಲಾಯಿತು, ಏತಕ್ಕಾಗಿ ಆಯಿತು ಎಲ್ಲವನ್ನೂ ಸಂಕ್ಷಿಪ್ತವಾಗಿ ಸಾರಾಂಶದ ರೂಪದಲ್ಲಿ ತಿಳಿಸುತ್ತೇನೆ. ಕೇಳುವಂತವರಾಗಿ ಎಂತೆಂದರು.

ರಾಕ್ಷಸ ರ  ಉಪಟಳ 

ಭರತ ಖಂಡದ ಉತ್ತರ ಭಾಗದಲ್ಲಿ ಅಯೋಧ್ಯಾ ಎಂಬ ಪಟ್ಟಣದ ಸುತ್ತಮುತ್ತ ಲಂಕಾ ಪ್ರದೇಶದಿಂದ ಬಂದ ರಾಕ್ಷಸರುಗಳ ಉಪಟಳ ಅಸಾಧುವಾಗಿತ್ತು. ಅಲ್ಲೆಲ್ಲಾ ಬಹುದಿನಗಳಿಂದ ತಮ್ಮ ತಮ್ಮ ಆಶ್ರಮಗಳಲ್ಲಿ ನೆಲಸಿದ್ದ ಋಷಿವರ್ಯರುಗಳಿಗೆ ಪದೇ ಪದೇ ತಪೋಭಂಗ ಆಗುತ್ತಿತ್ತು. ಒಂದು ದಿನ ಅವರೆಲ್ಲಾ ಸಭೆ ಸೇರಿ. ಅನಂತಶಯನನಾದ ಭಗವಾನ್ ಶ್ರೀವಿಷ್ಣುವಿನ ಬಳಿ ಹೋಗಿ ತಮಗೆ ಆಗುತ್ತಿರುವ ಈ ತೊಂದರೆಯನ್ನು ನಿವಾರಿಸುವಂತೆ ಬೇಡಿಕೊಳ್ಳಬೇಕೆಂದು ನಿರ್ಧರಿಸಿದರು. ಶ್ರೀ ವಿಷ್ಣುವು ಇವರ ದುಗುಡದ ವಿಷಯವನ್ನು ಕೇಳಿ, ಅಭಯ ಹಸ್ತವನ್ನು ನೀಡಿ, ತಾನೇ ಸ್ವತಃ ಒಂದು ಅವತಾರದಲ್ಲಿ ಈ ಕರ್ಮ ಭೂಮಿಗೆ ಬಂದು ಉಪದ್ರವವನ್ನು ನಿವಾರಿಸುವುದಾಗಿ ತಿಳಿಸಿದನು. ಸದಾ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ ಶ್ರೀ ವಿಷ್ಣುವು ತತ್ಕ್ಷಣ ಕಾರ್ಯೋನ್ಮುಖನಾದನು.

ಶ್ರೀರಾಮನ ಜನನ 

ದಶ ದಿಕ್ಕುಗಳಲ್ಲಿ ಚಲಿಸುವ ಶಕ್ತಿಯುಳ್ಳ ತನ್ನ ಗರುಡರಥವನ್ನು ಕರೆದು, ಈ ಕೂಡಲೆ ಭರತ ಖಂಡದಲ್ಲಿ ಅಯೋಧ್ಯಾ ಎಂಬ ಪಟ್ಟಣದಲ್ಲಿ ದಶರಥ ರಾಜ ಮನೆತನದಲ್ಲಿ ತಾನು ಜನಿಸಬೇಕೆಂದೂ ಆಜ್ಞಾಪಿಸಿದನು.ಈ ದಶರಥರಾಜನಿಗೆ ಅನೇಕ ಹೆಂಡತಿಯರು ಇದ್ದರು.  ಈ ಧರ್ಮಪತ್ನಿಯರಲ್ಲಿ ಕೌಸಲ್ಯ ಎಂಬವಳು ಒಬ್ಬಳು. ಬಹಳ ದಿನಗಳಾದರೂ ಮಕ್ಕಳಾಗದ ಕಾರಣ ದಶರಥನು ಗುರುಗಳಲ್ಲಿ ನಿವೇದಿಸಲು ಅವರು ಒಂದು ಫಲವನ್ನು ಪೂಜಿಸಿ ಅದರಲ್ಲಿ ಸಂತಾನಶಕ್ತಿ ಬೀಜ ಮಂತ್ರವನ್ನು ಉಪದೇಶಿಸಿ ಆಶೀರ್ವದಿಸಿ ಕೌಸಲ್ಯೆಗೆ ತಿನ್ನಲು ಕೊಡುವಂತೆ ಹೇಳಿದರು. ಕೆಲವು ದಿನಗಳ ನಂತರ ಗರ್ಭವತಿಯಾದ ಕೌಸಲ್ಯೆಯು ಗಂಡು ಮಗುವಿಗೆ ಜನ್ಮವಿತ್ತಳು. ಮತ್ತೆ ನಾಮಕರಣ ಮಾಡಲು ಗುರುಗಳ ಬಳಿ ಬಂದಾಗ ದೂರದೃಷ್ಟಿಯುಳ್ಳ ಗುರುಗಳು ಈತನು ಶ್ರೀಮನ್ನಾರಾಯಣನೇ, ರಾವಣನ ರ್ಧನಕ್ಕಾಗಿ ಅವತರಿಸಿದ್ದಾನೆಂದು ಮನಗಂಡು ಮಗುವಿಗೆ “ಶ್ರೀರಾಮ” ಎಂದು ಹೆಸರಿಟ್ಟರು. 

ವಾಲ್ಮೀಕಿ ಆಶೀರ್ವಾದ  

ಈ ಶ್ರೀರಾಮನ ಬಾಲ್ಯ ಲೀಲೆ, ಧನು ದೆಷೆಯಿಂದ ಜಾನಕಿಯನ್ನು ವರಿಸಿದ್ದು, ಕೈಕೇಯಿಯ ಅನುಗ್ರಹದಿಂದ ಕಾಡಿಗೆ ಬಂದದ್ದು, ಮಾಯಾ ಜಿಂಕೆಯ ಆಸೆಯಿಂದ ಸೀತೆ ರಾವಣನ ಅಪಹರಣಕ್ಕೆ ಒಳಗಾದದ್ದು ಎಲ್ಲವನ್ನೂ ಹಿಂದಿನ ವರ್ಷದ ಬ್ರಹ್ಮ ರಥೋತ್ಸವದ ಸಮಯದಲ್ಲಿ ಸವಿತ್ಸಾರವಾಗಿ ತಿಳಿಸಿದ್ದೇನೆ. ಪ್ರಮಾದವಶಾತ್ ವಾಲ್ಮೀಕಿ ಮುನಿವರ್ಯರು ರಾಮಾಯಣವನ್ನು ರಚಿಸುವಾಗ ಒಂದು ಭಾಗವನ್ನು  ಬರೆಯಲು ಆಗಿರಲಿಲ್ಲ. ಕೆಲವು ದಿನಗಳ ಹಿಂದೆ ವಾಲ್ಮೀಕಿ ಮಹರ್ಷಿಯವರು ಬೆಲಗೂರಿನ ಅಳಿಯಂದಿರಾದ ಪ್ರಭಾಕರವರ ಸ್ವಪ್ನದಲ್ಲಿ ಬಂದು, “ಎಲೈ ಪ್ರಭಾಕರ್ ಅವರೇ ತಮ್ಮ ನಾಮಧೇಯವು ಸೂರ್ಯನ ಹೆಸರಿಗೆ ಹೋಲುತ್ತದೆ, ಜೊತೆಗೆ ಶ್ರೀರಾಮನೂ ಸೂರ್ಯವಂಶಿಯು, ಅಲ್ಲದೇ ಇತ್ತೀಚನ ದಿನಗಳಲ್ಲಿ ತಮಗೆ ಆಧ್ಯಾತ್ಮದ ಶೈಲಿಯಲ್ಲಿ ಬರೆಯುವ ಕಲೆ ಕರಗತವಾಗಿದೆ. ಆದ್ದರಿಂದ ನಾನು ರಾಮಾಯಣ ಬರೆಯುವಾಗ ಬಿಟ್ಟು ಹೋದ ಅತ್ಯಂತ ಪ್ರಮುಖವಾದ ಘಟ್ಟವನ್ನು ನೀವೇ ಸೂಕ್ತ ವ್ಯಕ್ತಿಯೆಂದು ನಿಮ್ಮಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯಲು ಉತ್ಸುಕನಾಗಿ ಬಂದಿದ್ದೇನೆ ಎಂದು ತಿಳಿಸಿ ಬ್ರಹ್ಮಿ ಮುಹೂರ್ತದ ವರೆಗೂ ಅವಿರತವಾಗಿ ಬರೆಸಿದ್ದಾರೆ. ಈ ಬ್ರಹ್ಮ ರಥೋತ್ಸವದ ಸಮಯದಲ್ಲಿ ಭಕ್ತಾದಿಗಳಿಗೆ ಈ “ನೀತಿ ರಾಮಾಯಣ” ಭಾಗವನ್ನು ತಿಳಿಸುತ್ತೇನೆ. ಕೇಳುವಂತವರಾಗಿ ಎಂದು ಭಜಿಸಲು ಪ್ರಾರಂಭಿಸಿದರು.

“ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯ ತವ ಕಿಂ ವದ, ರಾಮಧೂತ ಕೃಪಾ ಸಿಂಧೋ ಮತ್ಕಾರ್ಯ ಸಾಧಯ ಪ್ರಭೋ.”



“ರಾಮ ಲಕ್ಷ್ಮಣ್ ಜಾನಕಿ, ಜೈ ಬೋಲೋ ಹನುಮಾನ್ ಕೀ, ಜಾನಕಿ ಶೋಧಕ ವಾನರ ಕೀ, ಜೈ ಬೋಲೋ ಹನುಮಾನ್ ಕೀ”.

ನೀತಿ ಪಾಠ 

ಶ್ರೀ ರಾಮ, ಲಕ್ಷ್ಮಣ, ಜಾಂಬುವಂತ, ಹನುಮಂತ ಹಾಗೂ ವಾನರ ಸೇನೆ ದಕ್ಷಿಣ ಭಾರತದ ತಟದ ತನಕ ಬಂದಿದ್ದರು. ಆದರೂ ರಾಮನಿಗೆ ಸೀತೆಯಿರುವುದು ಖಾತ್ರಿಯಾದರೆ ಮಾತ್ರ ಲಂಕೆಗೆ ನುಗ್ಗಬೇಕು, ಇಲ್ಲವಾದರೆ ವೃತಾ ನೀತಿಗೆ ವಿರುದ್ಧವಾಗಿ ದಾಳಿ ಮಾಡಿದಂತಾಗುತ್ತದೆಂದು ಭಾವಿಸಿ, ಹನುಮಂತನನ್ನು ಲಂಕೆಗೆ ಕಳುಹಿಸಿದನು. ಚಂಗನೆ ಹಾರಿದ  ಆತ, ಅಶೋಕ ವನದಲ್ಲಿ ವ್ಯಾಕುಳಲಾಗಿ ಕುಳಿತಿದ್ದ ಸ್ತ್ರೀಯನ್ನು ಕಂಡು ಈಕೆಯೇ ಸೀತಾಮಾತೆಯೆಂದು ಭಾವಿಸಿದನು.



 ತತ್ಕ್ಷಣ ಈ ವಿಷಯವನ್ನು ರಾಮನಿಗೆ ಬಂದು ತಿಳಿಸಿ, “ಮಹಾಪ್ರಭುಗಳೇ, ತಾವು ಆಜ್ಞಾಪಿಸಿದರೆ ಕೂಡಲೆ ಹಾರಿ ಮಾತೆಯನ್ನು ಹೊತ್ತು ತರುವೆ, ಇಲ್ಲವಾದರೆ ಇಡೀ ಅಶೋಕವನವನ್ನೆ ಬೇಕಾದರೆ ಎತ್ತಿ ತರುವೆ.” ಎಂದು ಅರುಹಿದನು. ಅದಕ್ಕೆ ರಾಮನು, “ಭಕ್ತ ಹನುಮ, ನಿನ್ನ ಸಲಹೆ ಗಮನಾರ್ಹ ಮತ್ತು ನಿನ್ನ ಶಕ್ತಿಯ ಮೇಲೆ ನನಗೆ ಅಪಾರ ನಂಬಿಕೆ ಹಾಗೂ ಗೌರವ ಇದೆ. ಆದರೆ ಇದು ನೀತಿಗೆ ವಿರುದ್ಧವಾದದ್ದು. ಕ್ಷತ್ರಿಯನಾದ ನಾನು ಹೋರಾಡಿ ಸೀತೆಯನ್ನು ಮರಳಿ ಪಡೆಯುವುದು ನ್ಯಾಯ ಸಮ್ಮತ. ಅಲ್ಲವೇ?” ಎಂದು ಹನುಮನಿಗೆ ನೀತಿ ಪಾಠ ಮಾಡಿದನು. ಶ್ರೀ ರಾಮನ ರೂಪದಲ್ಲಿದ್ದ ವಿಷ್ಣುವು  ತಾನು ಈ ಅವತಾರ ಧರಿಸಿದ್ದು ರಾವಣನ ಸಂಹಾರಕ್ಕಾಗಿ ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಗುಳ್ನಕ್ಕನು.


ನಾಂದಿ 

 ಈ ನೀತಿಯ ಅಂಶವನ್ನು ಬರೆಯುವುದು ಆಗಿರಲಿಲ್ಲ. ಈಗ ನಿನ್ನಿಂದ ಆಗಲಿ ಎಂದು ಪ್ರಭಾಕರನ ಕೈಯಲ್ಲಿ ಬರೆಹಿಸಿ ಸೂರ್ಯೋದಯ ಆಗುವುದರಲ್ಲಿ ವಾಲ್ಮೀಕಿ ಮಹರ್ಷಿಗಳು ಅಂತರ್ದಾನರಾದರು.

ಇತ್ತ ಬೆಲಗೂರಿನಲ್ಲಿ ಹರಿಕತೆ ಮಾಡುತ್ತಿದ್ದ ಅವಧೂತ ಪುರಾಣಿಕರು, ಹೀಗೇ ಹನುಮ ಸೀತಾ ಮಾತೆಯನ್ನೋ ಅಥವಾ ಇಡೀ ಅಶೋಕವನವನ್ನೆ ಹೊತ್ತು ತಂದು ಬಿಟ್ಟಿದ್ದರೆ ರಾಮಾಯಣದ ಕತೆ ಅಲ್ಲಿಗೆ ಮೊಟಕಾಗಿ ತಮ್ಮಂತವರಿಗೆ ಸಂಗತಿಗಳು ಇಲ್ಲದಂತಾಗಿ ಬಿಡುತ್ತಿತ್ತು ಎಂದು ಒಳಗೊಳಗೇ ನಗುತ್ತಾ ಹಾಡಲು ಪ್ರಾರಂಭಿಸಿದರು,

““ರಾಮ ಲಕ್ಷ್ಮಣ್ ಜಾನಕಿ, ಜೈ ಬೋಲೋ ಹನುಮಾನ್ ಕೀ, ಜಾನಕಿ ಶೋಧಕ ವಾನರ ಕೀ, ಜೈ ಬೋಲೋ ಹನುಮಾನ್ ಕೀ”. 

pinterest  ಚಿತ್ರಗಳಿಗೆ ಧನ್ಯವಾದಗಳು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...